ನಂಜನಗೂಡು: ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಭ್ರಷ್ಟಾಚಾರ ಮತ್ತು ಹಗರಣ ನಡೆದಿಲ್ಲ. ಇದೆಲ್ಲಾ ಮುಂಬರುವ ಗ್ರಾಮ ಪಂಚಾಯಿತಿಯ ಚುನಾವಣೆಯ ಗಿಮಿಕ್ ಎಂದು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಂಗಳಮ್ಮ ಸ್ಪಷ್ಟನೆ ನೀಡಿದ್ದಾರೆ.

ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಅಧಿಕಾರದ ಅವಧಿಯಲ್ಲಿ ಕೆಲಸ ಮಾಡಿದ್ದೇವೆ. ಆ ಕೆಲಸಗಳನ್ನು ನಾವು ತೋರಿಸುತ್ತೇವೆ ಇದನ್ನು ಸಹಿಸದೆ ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಮಹದೇವ ಅವರು ನಮ್ಮ ಮೇಲೆ ಸುಳ್ಳು ಆರೋಪಿಗಳನ್ನು ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಎರಡು ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಇಲ್ಲಿ ಯಾವುದೇ ಭ್ರಷ್ಟಾಚಾರವಾಗಲಿ, ಹಗರಣವಾಗಲಿ ನಡೆದಿಲ್ಲ. ಮಹದೇವರವರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಇರುವುದರಿಂದ ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಹೊರತು ಯಾವುದೇ ರೀತಿಯ ಹಗರಣ ನಡೆದಿಲ್ಲ. ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ ಅವರ ಮಾತಿನಂತೆ ನಾವು ಕೂಡ ತನಿಖೆಗೆ ಸಿದ್ದರಾಗಿದ್ದೇವೆ. ಮಹದೇವರವರು ಗ್ರಾಮ ಪಂಚಾಯತಿಯ ಸದಸ್ಯರಾಗಿದ್ದರು ಅವರ ಅಧಿಕಾರದ ಅವಧಿಯಿಂದಲೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನಂತರ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಹಾಗೂ ಸದಸ್ಯ ಡಿ.ಎಂ ವೆಂಕಟೇಶ್ ಮಾತನಾಡಿ, ನಮ್ಮೂರಿನ ಇತಿಹಾಸದಲ್ಲೇ ನಾವು ಸ್ಮಶಾನವನ್ನು ಅಭಿವೃದ್ಧಿ ಮಾಡಿದ್ದೇವೆ ಸ್ಮಶಾನಕ್ಕೆ ರಸ್ತೆ ಇರಲಿಲ್ಲ ಮತ್ತು ಅಭಿವೃದ್ಧಿ ಆಗಿರಲಿಲ್ಲ ಅದನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಕಾಮಗಾರಿಗಳನ್ನು ನಡೆಸದೆ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿರುವುದು ಸುಳ್ಳು.

ನಮ್ಮ ಪಂಚಾಯಿತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಒಂದು ವೇಳೆ ನಡೆದಿದ್ದರೆ ತಪ್ಪಿಸಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ, ಮಹದೇವರವರು ಗ್ರಾಮ ಪಂಚಾಯಿತಿಯ ಸದಸ್ಯರಾಗಿದ್ದವರು ಅವರ ಕಾಲಾವಧಿಯಲ್ಲೂ ಹಗರಣ ನಡೆದಿದೆ ಅದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯತಿಯ ಸದಸ್ಯ ಕೆ.ಎಂ ರಾಘವೇಂದ್ರ ಮಾತನಾಡಿ, ಕಳೆದ ಐದು ವರ್ಷದಿಂದ ಯಾವುದೇ ಕಾರಣಕ್ಕೂ ಹಗರಣ ನಡೆದಿಲ್ಲ. ಅವರು ಮಾಡದೇ ಇದ್ದ ಕೆಲಸವನ್ನು ನಾವು ಮಾಡಿದ್ದೇವೆ. ಹೊಸೂರು ಗ್ರಾಮದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಿಸಿದ್ದೇವೆ.

2023- 24ನೇ ಸಾಲಿನಲ್ಲಿ ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ಮುಂದುವರಿದ ಕಾಮಗಾರಿಯನ್ನು ಮಾಡಿದ್ದೇವೆ. ನಾವು ಕಾಮಗಾರಿ ನಡೆಸದೆ ಯಾವುದೇ ಬಿಲ್ಲುಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಮಂಗಳಮ್ಮ, ಗ್ರಾ.ಪಂ ಸದಸ್ಯರಾದ ಡಿ.ಎಂ ವೆಂಕಟೇಶ್, ಕೆ.ಎಂ ರಾಘವೇಂದ್ರ ಹಾಜರಿದ್ದರು.