ನಂಜನಗೂಡು: ಕಾಯಕ ಹಾಗೂ ದಾಸೋಹದ ತತ್ವಗಳನ್ನು ತಮ್ಮ ಆಚರಣೆಯಲ್ಲಿ ಅಳವಡಿಸಿಕೊಂಡಿದ್ದ ಮಲ್ಲನಮೂಲೆ ಶ್ರೀ ಚೆನ್ನಬಸವ ಸ್ವಾಮೀಜಿಗಳು ಭಕ್ತರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಮಠದ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು ಎಂದು ಸುತ್ತೂರು ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಗುರುವಾರ ತಾಲ್ಲೂಕು ಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ಹಾಗೂ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಇತ್ತೀಚಿಗೆ ಲಿಂಗೈಕ್ಯರದ ಶ್ರೀ ಗುರು ಕಂಬಳ್ಳಿಶ್ವರ ಮಠದ ಮಠಾಧ್ಯಕ್ಷರಾದ ಶ್ರೀ ಚೆನ್ನಬಸವಸ್ವಾಮೀಜಿಗಳ ಭಕ್ತಿಯ ನೆನಪು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಾ, ಶ್ರೀಗಳು ಜಾತಿ,ಮತ ಹಾಗೂ ಧರ್ಮಾತೀತವಾಗಿ ಭಕ್ತರನ್ನು ಹೊಂದಿದ್ದರು.
ತಪ್ಪುಗಳು ಕಂಡಾಗ ನಿಷ್ಟುರತೆಯಿಂದ ಎಚ್ಚರಿಸುತ್ತಿದ್ದರು. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸ್ವಾಮೀಜಿ, ಕಾರ್ತೀಕ ಮಾಸದ ಮೂರನೇ ಸೋಮವಾರವೇ ದೇಹಾಂತ್ಯ ಮಾಡುವ ಇಂಗಿತ ಹೊಂದಿದ್ದರು, ಅವರು ನಿಶ್ಚಿತ ಸಮಯದಲ್ಲೇ ಲಿಂಗೈಕ್ಯರಾಗುವ ಮೂಲಕ ತಮ್ಮ ಆಶಯದಂತೆ ನಡೆದುಕೊಂಡಿದ್ದಾರೆ, ಶ್ರೀ ಗುರಕಂಬಳೀಶ್ವರ ಮಠಧ ನೂತನ ಪೀಠಾಧಿಪತಿಯಾಗಲಿರುವ ಕಿರಿಯ ಶ್ರೀಗಳಿಗೆ ಸಮಾಜದ ಎಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯ ಎಂದು ಹೇಳಿದರು.
ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದ ಚೆನ್ನಬಸವಸ್ವಾಮೀಜಿಯವರು ಭೌತಿಕವಾಗಿ ಮರೆಯಾಗಿದ್ದರೂ, ಅವರ ಸರಳ ಜೀವನ ಶೈಲಿ ಹಾಗೂ ಮಠದಲ್ಲಿನ ಅಕ್ಷರ ಹಾಗೂ ಅನ್ನದಾಸೋಹ, ಸ್ವಾಭಿಮಾನದ ಸಂದೇಶಗಳ ಮೂಲಕ ಭಕ್ತರ ಮನದಲ್ಲಿ ಸದಾ ಕಾಲದಲ್ಲೂ ಉಳಿಯಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ದೇವನೂರು ಶ್ರೀ ಗುರುಮಲ್ಲೇಶ್ವರ ಮಠಾಧ್ಯಕ್ಷ ಮಹಾಂತಸ್ವಾಮಿಜಿ, ಹುಲ್ಲಹಳ್ಳಿ ವಿರಕ್ತಮಠದ ಚೆನ್ನಮಲ್ಲ ದೇಶೀಕೇಂದ್ರಸ್ವಾಮೀಜಿ, ಶಿರಮಳ್ಳಿ ಇಮ್ಮಡಿ ಮುರುಗಿ ಸ್ವಾಮೀಜಿ, ನಾಗರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಪ್ರೊ.ಸದಾಶಿವಮೂರ್ತಿ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ , ಮಲ್ಲನಮೂಲೆ ಮಠದ ಇಮ್ಮಡಿ ಸಿದ್ಧಲಿಂಗಸ್ವಾಮೀಜಿ, ಶಿವಪ್ಪ ದೇವರು, ಮಡಹಳ್ಳಿ ನಟರಾಜು, ಎನ್ಸಿ ಬಸವಣ್ಣ, ನಂದಿನಿ ಮಹೇಶ್, ಶಶಿಕಲಾ ಗಿರೀಶ್ ಸೇರಿದಂತೆ ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

