ನಂಜನಗೂಡು: ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಜನ ಜಾನುವಾರುಗಳು ತತ್ತರಿಸುವಂತಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದಲ್ಲಿ ಜೀವ ಜಲಕ್ಕಾಗಿ ಗ್ರಾಮಸ್ಥರು ಅಲೆದಾಡುತ್ತಿರುವ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ಸುದ್ದಿ ವಾಹಿನಿಯಲ್ಲಿ ವಿಸ್ತೃತವಾಗಿ ವರದಿಯನ್ನು ಪ್ರಸಾರ ಮಾಡಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಮತ್ತು ದಾಸನೂರು ಗ್ರಾಮ ಪಂಚಾಯಿತಿ ಆಡಳಿತ ಕೆಟ್ಟು ನಿಂತಿದ್ದ ನೀರಿನ ಘಟಕವನ್ನು ಸರಿಪಡಿಸಿ ಕುಡಿಯುವ ನೀರನ್ನು ಪೂರೈಕೆ ಮಾಡಿದ್ದಾರೆ. ದಾಸನೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸದೆ ಕೆಟ್ಟು ನಿಂತಿತ್ತು, ತೊಂಬೆ ನಲ್ಲಿಗಳಿಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿರಲಿಲ್ಲ.

ಕುಡಿಯುವ ನೀರನ್ನು ನಾಲ್ಕು ದಿನಕ್ಕೆ ಒಂದು ಬಾರಿ ಮಾತ್ರ ಬಿಡುತ್ತಾರೆ. ಕಪಿಲಾ ನದಿ ನೀರು ಸರಬರಾಜಾಗುವ ಗೇಟ್ ವಾಲ್ ಗಳು ಕೆಟ್ಟು ನಿಂತ ಪರಿಣಾಮ ಕುಡಿಯುವ ನೀರಿಗಾಗಿ ತೊಂದರೆ ಉಂಟಾಗಿತ್ತು. ಈ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ಸುದ್ದಿ ವಾಹಿನಿಯಲ್ಲಿ ವರದಿಯನ್ನು ಪ್ರಸಾರ ಮಾಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರಿಪಡಿಸಿ ಕುಡಿಯುವ ನೀರನ್ನು ಗ್ರಾಮಸ್ಥರಿಗೆ ಪೂರೈಕೆ ಮಾಡಿದ್ದಾರೆ. ಇದು ನ್ಯೂಸ್ ಕರ್ನಾಟಕ ವರದಿಯ ಫಲಶೃತಿಯಾಗಿದೆ. ಗ್ರಾಮಸ್ಥರು ನ್ಯೂಸ್ ಕರ್ನಾಟಕ ಸುದ್ದಿವಾಹಿನಿಯ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

