ನಂಜನಗೂಡು: ನಗರದ ಎಂಟನೇ ಕ್ರಾಸ್ ನಲ್ಲಿರುವ ಶ್ರೀ ಚಾಮುಂಡೇಶ್ವರಿ ಭಾವ ಸಾರ್ ಕ್ಷತ್ರಿಯ ಯುವಕರ ಸಂಘದಿಂದ ಆಷಾಡ ಮಾಸದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವವನ್ನು ಏರ್ಪಡಿಸಲಾಗಿತ್ತು.
ಬೆಳಿಗ್ಗೆ ಎಂಟು ಗಂಟೆಗೆ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಇರುವ ಪವಿತ್ರ ಕಪಿಲಾ ನದಿಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕಳಸ ಮತ್ತು ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ರಥದಲ್ಲಿ ಕುಳ್ಳಿರಿಸಿ ನಗರದ ರಾಜಬೀದಿಯ ಮೂಲಕ ಆರ್ ಪಿ ರಸ್ತೆಯ ಎಂಟನೇ ಕ್ರಾಸ್ ನಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಯಿತು.
ಬಳಿಕ ಅಮ್ಮನವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಚಂಡಿಕಾ ಹೋಮ ಹಾಗೂ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಸಲಾಯಿತು. ಇನ್ನು ಪೂಜೆಗೆ ಆಗಮಿಸಿದ ಸುಮಾರು 3 ಸಾವಿರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

