ಮೈಸೂರು: ಆಭರಣ ಮಾಡಿಕೊಡುವುದಾಗಿ ಚಿನ್ನದ ಗಟ್ಟಿ ಪಡೆದ ನೌಕರ ಮಾಲೀಕನಿಗೆ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಗೇರಿಯ ಶ್ರೀ ಕೃಷ್ಣ ಗೋಲ್ಡ್ ಸ್ಮಿತ್ ಅಂಗಡಿ ಮಾಲೀಕನಿಗೆ ನೌಕರ ರೋಹಮನ್ ಎಂಬಾತ 183 ಗ್ರಾಂ ಗಟ್ಟಿ ಚಿನ್ನ ಪಡೆದು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಲದ ಉದ್ದಾನ್ ಗ್ರಾಮದ ರೋಹಮನ್ ಕಳೆದ ಎರಡು ವರ್ಷಗಳಿಂದ ಶ್ರೀ ಕೃಷ್ಣ ಗೋಲ್ಡ್ ಸ್ಮಿತ್ ನ ಮಾಲೀಕ ಸುಖಾಂತ್ ಕೋಲೆ ಬಳಿ ಕೆಲಸ ಮಾಡುತ್ತಿದ್ದ. ಚಿನ್ನದ ಗಟ್ಟಿ ನೀಡಿದರೆ ಆಭರಣ ಮಾಡಿಕೊಡುತ್ತಿದ್ದ. ಎರಡು ವರ್ಷಗಳಿಂದ ಈ ಕೆಲಸದಲ್ಲಿ ನಂಬಿಕೆ ಹುಟ್ಟಿಸಿದ್ದ.
ಹೀಗಾಗಿ ಹಂತ ಹಂತವಾಗಿ ಆಭರಣ ಮಾಡಿಕೊಡುವಂತೆ ಚಿನ್ನದ ಗಟ್ಟಿಗಳನ್ನ ಕೊಟ್ಟಿದ್ದಾರೆ. ಆಭರಣಗಳನ್ನ ನೀಡದೆ ರೋಹಮನ್ ಚಿನ್ನದ ಗಟ್ಟಿ ಸಮೇತ ಪರಾರಿಯಾಗಿದ್ದಾನೆ. ರೋಹಮನ್ ವಿರುದ್ದ ಮಾಲೀಕ ಸುಖಾಂತ್ ಕೋಲೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

