ನಂಜನಗೂಡು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಹಾಡುಹಗಲೇ ಒಂಟಿ ಇದ್ದ ಮಹಿಳೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿರುವ ಪ್ರಕರಣ ನಂಜನಗೂಡಿನ ದೇವೀರಮ್ಮನಹಳ್ಳಿ ಸಾಯಿಬಾಬ ದೇವಸ್ಥಾನದ ಬಳಿ ನಡೆದಿದೆ.

ದ್ರಾಕ್ಷಾಯಿಣಿ(65) ಹಲ್ಲೆಗೆ ಒಳಗಾದವರಾಗಿದ್ದು, ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಮನೆ ಬಾಡಿಗೆ ಪಡೆಯುವ ನೆಪದಲ್ಲಿ ದುಷ್ಕರ್ಮಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆ ತೋರಿಸುತ್ತಿದ್ದ ವೇಳೆ ವೃದ್ದೆಯನ್ನ ಒಳಗೆ ತಳ್ಳಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ರಭಸಕ್ಕೆ ದ್ರಾಕ್ಷಾಯಿಣಿ ರವರ ಹಲ್ಲುಗಳು ಪುಡಿಪುಡಿಯಾಗಿ ಹೊರಬಂದು ಬಿದ್ದಿದೆ.

ಇವರ ಮಗ ದೇವನೂರು ಗಿರೀಶ್ ಶ್ರೀ ಗುರುಮಲ್ಲೇಶ್ವರ ಪ್ರೌಢ ಶಾಲೆಯ ಶಿಕ್ಷಕರಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ದ್ರಾಕ್ಷಾಯಿಣಿ ರವರನ್ನ ಕಂಡು ಮೃತಪಟ್ಟಿದ್ದಾರೆಂದು ಭಾವಿಸಿದ ದುಷ್ಕರ್ಮಿಗಳು ಆಕೆ ಧರಿಸಿದ್ದ ಚಿನ್ನದ ಒಡೆವಗಳನ್ನ ದೋಚಿ ಪರಾರಿಯಾಗಿದ್ದಾರೆ. ಎಷ್ಟು ಹೊತ್ತಾದರೂ ದ್ರಾಕ್ಷಾಯಿಣಿ ಕೆಳಗೆ ಬಾರದಿರುವುದನ್ನ ಕಂಡು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಗಾಯಗೊಂಡ ದ್ರಾಕ್ಷಾಯಿಣಿ ರವರನ್ನ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ದುಷ್ಕರ್ಮಿಗಳ ಸೆರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕ್ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ. ಇತ್ತಿಚಿನ ದಿನಗಳಲ್ಲಿ ನಂಜನಗೂಡಿನಲ್ಲಿ ಹಲವಾರು ಕ್ರೈಂ ಪ್ರಕರಣಗಳು ನಡೆಯುತ್ತಲೇ ಇದ್ದು ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಎಡೆಮುರಿ ಕಟ್ಟಬೇಕಿದೆ.