ನಂಜನಗೂಡು: ಇಂದಿನಿಂದ ಜ.20 ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ ನಡೆಯಲಿದ್ದು, ಬುಧವಾರ ಮಹಾದಾಸೋಹಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ನಂಜನಗೂಡು ತಾಲ್ಲೂಕಿನ ಸುತ್ತೂರು ಮಠದ ಕಪಿಲಾ ನದಿ ತೀರದಲ್ಲಿರುವ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಇಂದಿನಿಂದ ಜ.20 ರವರೆಗೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಇಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ, ಬಳಿಕ ಮಹಾದಾಸೋಹಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಆರು ದಿನಗಳ ಕಾಲ ನಡೆಯುವ ಸುತ್ತೂರು ಜಾತ್ರೆಯಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇರುವ ಹಿನ್ನೆಲೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ದಿನದ 24 ಗಂಟೆಗಳು ಪ್ರಸಾದ ವ್ಯವಸ್ಥೆ ದೊರೆಯಲಿದೆ.