ನಂಜನಗೂಡು: ಚರಂಡಿ ವ್ಯವಸ್ಥೆ ಇಲ್ಲ, ರಸ್ತೆ ಇಲ್ಲ, ಗೊಬ್ಬೆದ್ದು ನಾರುವ ಕಾಲೋನಿ, ಮಳೆ ಬಂದರೆ ಸೋರುವ ಮನೆಗಳು, ಕಣ್ಣಾಮುಚ್ಚಾಲೆ ಆಡುವ ವಿದ್ಯುತ್.ಇದು ಗ್ರಾಮವನ್ನು ಸ್ವಚ್ಛಗೊಳಿಸಿ ಆರೋಗ್ಯ ವಾತಾವರಣ ಕಲ್ಪಿಸಲು ಶ್ರಮಿಸುವ ಪೌರಕಾರ್ಮಿಕ ಕುಟುಂಬಗಳ ದುಃಸ್ಥಿತಿ.

ಸುಮಾರು 75 ವರ್ಷಗಳಿಂದ ವಾಸವಿರುವ 65 ಪೌರಕಾರ್ಮಿಕರ ಕುಟುಂಬಗಳನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಹೆಸರಲ್ಲಿ ಒಕ್ಕಲೆಬ್ಬಿಸುವ ಹುನ್ನಾರಕ್ಕೆ ಬೇಸತ್ತ ಕುಟುಂಬ ವರ್ಗ ಅಧಿಕಾರಿಗಳ ವಿರುದ್ದ ಸಿಡಿದೆದ್ದಿದ್ದಾರೆ. ಪ್ರಾಣ ಬೇಕಾದ್ರೆ ಬಿಡ್ತೀವಿ ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದು ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಗ್ರಾಮದ ಪೌರಕಾರ್ಮಿಕರ ಕಾಲೋನಿಯ ಜನರ ನರಳಾಟವಾಗಿದೆ. ಹಗಲಿರುಳು ಶ್ರಮವಹಿಸಿ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುವ ಈ ಜನರು ಕನಿಷ್ಠ ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿ ವಾಸಿಸುವ ಕುಟುಂಬಗಳಿಗೆ ಮತ್ತೊಂದು ಸ್ಥಳದಲ್ಲಿ ನಿವೇಶನ ನಿರ್ಮಿಸಿ ಹಕ್ಕು ಪತ್ರ ವಿತರಿಸಲಾಗಿದೆ. ಮತ್ತೊಂದೆಡೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನೆಪದಲ್ಲಿ ಕಾಲೋನಿಯ ನಿವಾಸಿಗಳನ್ನು ಎತ್ತಂಗಡಿ ಮಾಡುವ ಯತ್ನ ನಡೆಯುತ್ತಿದೆ.

ಇದಕ್ಕಾಗಿ ದಿವಂಗತ ಬಿ. ಬಸವಲಿಂಗಪ್ಪ ರವರ ಹೆಸರಲ್ಲಿ ಕಾಲೋನಿಯಿಂದ ದಬ್ಬುವ ಕೆಲಸಕ್ಕೆ ಮುನ್ನುಡಿ ಹಾಡಲಾಗಿದೆ. ಹುಲ್ಲಹಳ್ಳಿಯಿಂದ ಎರಡು ಕೀ.ಮಿ ದೂರದಲ್ಲಿ ಜಾಗ ಗುರುತಿಸಲಾಗಿದೆ. ಆದ್ರೆ ಈ ಕುಟುಂಬಗಳು ಗುರುತಿಸಿರುವ ಜಾಗಕ್ಕೆ ತೆರಳಲು ಸಿದ್ದವಿಲ್ಲ. ವಾಸ ಮಾಡಲು ಯೋಗ್ಯವಿಲ್ಲದ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.

ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗಲ್ಲ. ನಮ್ಮನ್ನು ಈ ಜಾಗದಲ್ಲೇ ಬದುಕಲು ಅವಕಾಶ ಕೊಡಿ, ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಪಟ್ಟುಹಿಡಿದಿದ್ದಾರೆ. ಇನ್ನಾದ್ರೂ ನಂಜನಗೂಡು ತಾಲ್ಲೂಕು ಆಡಳಿತ ಪೌರಕಾರ್ಮಿಕರ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸುವವರೇ ಕಾದು ನೋಡಬೇಕಿದೆ.