ನಂಜನಗೂಡು: ಐತಿಹಾಸಿಕ ಕಾರ್ಯ ಶ್ರೀ ಸಿದ್ದೇಶ್ವರಸ್ವಾಮಿಯ ಚಿಕ್ಕಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ನಡೆಯಿತು. ಕಾರ್ಯ ಶ್ರೀ ಸಿದ್ದೇಶ್ವರನ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುವ ಮೂಲಕ ಮಹಿಳೆಯರ ಜಾತ್ರೆಗೆ ಕಳೆ ತಂದಿದ್ದಾರೆ.
ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಹೋಬಳಿಯ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಚಿಕ್ಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿದೆ.
ಶ್ರೀ ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗ್ರಾಮಸ್ಥರು ವಿಶೇಷ ಪೂಜೆಯನ್ನು ಸಲ್ಲಿಸಿ, ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟಕ್ಕೆ ಹೆಗಲ ಮೇಲೆ ಒತ್ತುಕೊಂಡು ಹೋಗಲಾಯಿತು.

ಇದಕ್ಕೂ ಮುನ್ನ ಕಾರ್ಯಸಿದ್ದೇಶ್ವರ ಸ್ವಾಮಿಗೆ ದೇವಾಲಯದಲ್ಲಿ ಕ್ಷೀರ ಅಭಿಷೇಕ, ರುದ್ರ ಅಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ, ಹೂವಿನಿಂದ ಅಲಂಕಾರ ಮಾಡಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮಹಾ ಮಂಗಳಾರತಿ ಮಾಡಿ ದೇವರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಯಿತು.
ಚಿಕ್ಕ ಜಾತ್ರಾ ಅಂಗವಾಗಿ ಹೂವಿನ ಪಲ್ಲಕ್ಕಿ ಉತ್ಸವ, ಹುಲಿವಾಹನೋತ್ಸವ ವಿಜೃಂಭಣೆಯಿಂದ ಜರುಗಿತು. ಚಿಕ್ಕ ಜಾತ್ರಾ ಮಹೋತ್ಸವದಲ್ಲಿ ಕಾರ್ಯ ಸಿದ್ದೇಶ್ವರನಿಗೆ ಹರಕೆಹೊತ್ತ ಭಕ್ತರು ಪಂಜಿನ ಸೇವೆ, ಧೂಪ ದೀಪದ ಸೇವೆ ಬಾಯಿ ಬೀಗ ಸೇವೆಯನ್ನು ನೆರವೇರಿಸಿದರು. ಈ ಭಾಗದ ಸುತ್ತಮುತ್ತಲಿನ ರೈತರು ತಮ್ಮ ಜಾನುವಾರುಗಳನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪೂಜೆಯನ್ನು ಸಲ್ಲಿಸಿದರು.
ಇದರಿಂದ ಜಾನುವಾರುಗಳಿಗೆ ಯಾವುದೇ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರ ಸೇರಿದ್ದರು. ಅದರಂತೆ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮಹಿಳೆಯರ ಜಾತ್ರೆ ಎಂದೇ ಪ್ರಖ್ಯಾತಿ ಪಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

