ನಂಜನಗೂಡು: ಕೇರಳದ ವೈನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇದರ ಪರಿಣಾಮವಾಗಿ ನಂಜನಗೂಡಿನ ಮೂಲಕ ಹರಿಯುವ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. ವರ್ಷಗಳಿಂದ ಬರಡಾಗಿದ್ದ ನದಿಗೆ ಇದೀಗ ಜೀವ ಕಳೆ ಬಂದಂತಾಗಿದೆ.

ಕಬಿನಿ ಜಲಾಶಯಕ್ಕೆ ಪ್ರಸ್ತುತ 23,009 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ಇದಕ್ಕೆ ಪ್ರತಿಯಾಗಿ 9,958 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 2284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ 2281.95 ಅಡಿ ನೀರು ಸಂಗ್ರಹವಾಗಿದೆ. ಅಂದರೆ ಜಲಾಶಯ ತುಂಬಲು ಇನ್ನೂ ಕೇವಲ ಒಂದೇ ಅಡಿ ಬಾಕಿ ಇದೆ. 19.52 TMC ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 18.20 TMC ನೀರು ಸಂಗ್ರಹವಾಗಿದೆ.

ಹೊರಬಿಡಲಾಗುತ್ತಿರುವ ನೀರಿನಿಂದಾಗಿ ನಂಜನಗೂಡಿನ ಕಪಿಲಾ ನದಿಗೆ ಹರಿವು ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದಾಗಿ, ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಸ್ನಾನಘಟ್ಟಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಅಲ್ಲದೆ 16 ಕಲ್ಲು ಮಂಟಪವೂ ಅರ್ಧಕ್ಕೆ ನೀರಿನಲ್ಲಿ ಮುಳುಗಿದೆ.

ದೇವಾಲಯಕ್ಕೆ ಆಗಮಿಸುವ ಭಕ್ತರು ಮತ್ತು ಸಾರ್ವಜನಿಕರಿಗೆ ಸ್ನಾನಕ್ಕೆ ತೆರಳದಂತೆ ಆಡಳಿತ ಮಂಡಳಿ ನಿರ್ಬಂಧ ವಿಧಿಸಿದೆ. ನದಿ ದಂಡೆ ಮತ್ತು ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ತಾಲ್ಲೂಕು ಆಡಳಿತ ಸೂಚನೆ ನೀಡಿದೆ. ನದಿಗೆ ಇಳಿಯದಂತೆ ಮನವಿ ಮಾಡಲಾಗಿದೆ. ಒಂದೆಡೆ ಬರಡಾಗಿದ್ದ ಕಪಿಲೆಗೆ ಜೀವ ಕಳೆ ಬಂದಿರುವುದು ರೈತರಲ್ಲಿ ಸಂತಸ ತಂದರೆ, ಮತ್ತೊಂದೆಡೆ ಪ್ರವಾಹದ ಆತಂಕವೂ ಕಾಡುತ್ತಿದೆ.