ಮೈಸೂರು: ನಗರದ ಕೆಆರ್ಎಸ್ ರಸ್ತೆಗೆ ರಾಜಕುಮಾರಿಯ ಸ್ಮರಣಾರ್ಥ ಪ್ರಿನ್ಸಸ್ ಹೆಸರು ಇಡಲಾಗಿದೆ. ಈಗ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವುದಕ್ಕೆ ನನ್ನ ವಿರೋಧವಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕೆಆರ್ಎಸ್ ರಸ್ತೆಗೆ ಮರು ನಾಮಕರಣ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಮೈಸೂರು ರಾಜಮನೆತನವನ್ನು ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ. ಆದರೆ, ನಾನು ಸಂಸದನಾಗಿ ಆಯ್ಕೆಯಾದ ಬಳಿಕ ಚಾಮುಂಡಿ ಬೆಟ್ಟ ಪ್ರಾಧಿಕಾರ, ಕುರುಬಾರಹಳ್ಳಿ ವಿಚಾರ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹಲವು ವೈಯಕ್ತಿಕ ವಿಚಾರಗಳನ್ನು ಹೇಳಲು ಇಚ್ಛಿಸುವುದಿಲ್ಲ. ರಾಜಕಾರಣಕ್ಕೆ ಬಂದ ಮೇಲೆ ನನ್ನನ್ನು ಹೆಚ್ಚು ಗುರಿ ಮಾಡಲಾಗುತ್ತಿದೆ ಎಂದರು.
ಕೆಆರ್ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲಿ ಎಂದ ಮಾಜಿ ಪ್ರತಾಪ್ ಸಿಂಹ ಹೇಳಿದ್ದಾರೆ. ಆದರೆ, ಅವರು ಇತಿಹಾಸ ಮರೆತಿದ್ದಾರೆ ಅನ್ನಿಸುತ್ತೆ. ನಾನು ಇತಿಹಾಸ ಹೇಳಿದ ಮೇಲೆ ಮತ್ತೆ ನೆನಪಾಗಬಹುದು. ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ನನ್ನ ವಿರೋಧವಿಲ್ಲ. ಆದರೆ, ಪ್ರಿನ್ಸೆಸ್ ರಸ್ತೆಗೆ ಅವರ ಹೆಸರಿಡುವುದು ಬೇಡ. ಹಿಂದಿನಿಂದಲೂ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ, ಕೆಆರ್ಎಸ್ ರಸ್ತೆ ಎಂದು ಕರೆಯುತ್ತಾರೆ.
ರಾಜಕುಮಾರಿ ಕೃಷ್ಣರಾಜಮ್ಮಣ್ಣಿ ಹಾಗೂ ಅವರ ಮಕ್ಕಳು ಟಿಬಿ ಕಾಯಿಲೆಯಿಂದ ಮೃತರಾಗುತ್ತಾರೆ. ಈ ರೀತಿ ಯಾರಿಗೂ ಆಗಬಾರದು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಂಗಿಯ ನೆನೆಪಿಗಾಗಿ ಅಲ್ಲಿ ಟಿಬಿ ಆಸ್ಪತ್ರೆ ಕಟ್ಟಿಸುತ್ತಾರೆ. ಅದಕ್ಕೆ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ ಅಥವಾ ರಾಜಕುಮಾರಿ ರಸ್ತೆ ಎಂದು ಕರೆದರು. ಬಳಿಕ ಆ ರಸ್ತೆಯನ್ನು ಕೆಆರ್ಎಸ್ ರಸ್ತೆ ಎಂದು ಕರೆಯಲಾಗುತ್ತಿದೆ ಎಂದರು.
ಈಗ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡಲು ಮಹಾನಗರ ಪಾಲಿಕೆ ತೀರ್ಮಾನ ಮಾಡಿದೆ. ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆಯೇ ನಡೆದಿಲ್ಲ. ಅಲ್ಲಿ ಜನಪ್ರತಿನಿಧಿಗಳು ಇಲ್ಲ. ಈಗ ರಸ್ತೆಗೆ ನಾಮಕರಣ ಮಾಡುವ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಇದೇ ವಿಚಾರಕ್ಕೆ ಹಿಂದಿನಿಂದಲೂ ಸಾಕಷ್ಟು ಜನರು ಹೋರಾಟ ಮಾಡುತ್ತಿದ್ದಾರೆ. ಈಗ ಮಹಾನಗರ ಪಾಲಿಕೆಗೆ ಸಾಕಷ್ಟು ಜನ ಆಕ್ಷೇಪಣೆ ಸಲ್ಲಿಸಿದರೆ. ಮೈಸೂರಿನಲ್ಲಿ ಸಾಕಷ್ಟು ರಸ್ತೆಗಳಿವೆ. ಅದರಲ್ಲಿ ಯಾವುದಕ್ಕಾದರೂ ಸಿದ್ದರಾಮಯ್ಯನವರ ಹೆಸರಿಡಲಿ. ಅದಕ್ಕೆ ನನ್ನ ವಿರೋಧವಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

