ನಂಜನಗೂಡು: ತಾಲ್ಲೂಕಿನ ಕಾಳಿಹುಂಡಿ ಗ್ರಾಮದಲ್ಲಿ ಕುರುಬನಕಟ್ಟೆ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಘನನೀಲಿ ಸಿದ್ದಪ್ಪಾಜಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಸಿದ್ದಪ್ಪಾಜಿ ಕೊಂಡೋತ್ಸವ ನೆರವೇರಿತು.

ಕಾಳಿಹುಂಡಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಘನನೀಲಿ ಸಿದ್ದಪ್ಪಾಜಿ ದೇವಾಲಯದಲ್ಲಿ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸೋಮವಾರ ಬೆಳಗಿನ ಜಾವದಲ್ಲಿ ದೇವರಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಫಲಪುಷ್ಪ ಅಭಿಷೇಕ, ಭಂಗಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಗರ್ಭಗುಡಿಯಲ್ಲಿರುವ ಶ್ರೀ ಮಂಟೆಸ್ವಾಮಿ ಮತ್ತು ಸಿದ್ದಪ್ಪಾಜಿ ದೇವರ ಮೂರ್ತಿಗೆ ವಿವಿಧ ರಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ನಂದಿಕಂಬ ಕುಣಿತ, ಸುತ್ತಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ದಪ್ಪಾಜಿಯ ಕಂಡಾಯದ ಮೆರವಣಿಗೆ ಮಾಡಲಾಯಿತು. ನಂತರ ಹಾಲರವಿ ಉತ್ಸವ ನೆರವೇರಿಸಲಾಯಿತು. ದೇವಾಲಯದ ಮುಂಭಾಗದಲ್ಲಿ ಹಾಕಿದ್ದ ಕೊಂಡದಲ್ಲಿ ಶ್ರೀ ಸಿದ್ದಪ್ಪಾಜಿಯ ದೇವರ ಗುಡ್ಡಪ್ಪ ಶಿವಣ್ಣ ಕೊಂಡವನ್ನು ಹಾಯ್ದದರು. ನಂತರ ಶ್ರೀ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ದೇವರಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವರ ದರ್ಶನವನ್ನು ಪಡೆದು ಪುನೀತರಾದರು. ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. ಶ್ರೀ ಸಿದ್ದಪ್ಪಾಜಿಯ ಕೊಂಡೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಂಜನಗೂಡು ಗ್ರಾಮಾಂತರ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.