ನಂಜನಗೂಡು: ವರುಣನ ಆರ್ಭಟಕ್ಕೆ ಗದ್ದೆಗಳು ಗ್ರಾಮದ ಮುಖ್ಯ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಗದ್ದೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.
ಸುಮಾರು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲು ಹಾನಿಯಾಗಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸಹಳ್ಳಿ ಗ್ರಾಮದ ಬಳಿ ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದ್ದು ಇದರಿಂದ ಕಬಿನಿ ಬಲದಂಡೆ ನಾಲೆಯ 24ನೇ ಗೇಟ್ ಇಂದ ಬರುತ್ತಿರುವ ನೀರು ಮತ್ತು ಮಳೆ ನೀರು, ಗದ್ದೆಗಳಿಗೆ ನುಗ್ಗಿದ ಪರಿಣಾಮ ಜಮೀನುಗಳು ಜಲಾವೃತವಾಗಿವೆ.
ಹೊಸಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ನೀರು ಹರಿಯುತ್ತಿದ್ದು ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯು ಜಲಾವೃತವಾಗಿರುವುದರಿಂದ ಗ್ರಾಮಸ್ಥರು ಸಂಚರಿಸಲು ತುಂಬಾ ತೊಂದರೆಯಾಗಿದೆ.
ಅಲ್ಲದೆ ಮಳೆ ಬಂದ ಸಂದರ್ಭದಲ್ಲಿ ಗದ್ದೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನೀರು ಸರಾಗಿ ಹರಿದು ಹೋಗುವಂತೆ ಕಾಮಗಾರಿಯನ್ನು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

