ನಂಜನಗೂಡು: 80 ವರ್ಷಗಳಿಂದ ಖರಾಬು ಜಮೀನಿನಲ್ಲಿ ವಾಸವಿದ್ದ ಕುಟುಂಬಗಳನ್ನ 5 ತಿಂಗಳ ಹಿಂದೆ ಬೀದಿಪಾಲು ಮಾಡಿದ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಂಡು ಸಂತ್ರಸ್ಥ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಸೂಚನೆ ಬಂದರೂ ಮೈಸೂರು ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲ್ಲೂಕು ಆಡಳಿತ ಕ್ಯಾರೆ ಎನ್ನದೆ ಜಾಣ ಕುರುಡರಂತೆ ವರ್ತಿಸಿರುವ ಅಚ್ಚರಿ ಅಂಶ ಬೆಳಕಿಗೆ ಬಂದಿದೆ.
ಬೀದಿಪಾಲಾದ ಕುಟುಂಬಗಳಿಗೆ ನ್ಯಾಯ ಒದಗಿಸದ ಜಿಲ್ಲಾಡಳಿತದ ಬಗ್ಗೆ ಸಂತ್ರಸ್ಥ ಕುಟುಂಬಗಳು ಹಿಡಿಶಾಪ ಹಾಕುತ್ತಿವೆ. ತೋರಿಕೆಗಾಗಿ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಕೇವಲ ಸಾಂತ್ವನ ಹೇಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.
ನಂಜನಗೂಡು ತಾಲ್ಲೂಕು ಹೊರಳವಾಡಿ ಹೊಸೂರು ಗ್ರಾಮದ ಖರಾಬು ಜಾಗದಲ್ಲಿ 85 ವರ್ಷಗಳಿಂದ ಹಂದಿಜೋಗಿ ಸಮುದಾಯದ ಅಕ್ಷತಾ ಎಂಬುವರ ಕುಟುಂಬ ಮೂರು ತಲೆಮಾರುಗಳಿಂದ ವಾಸವಿತ್ತು. 5 ತಿಂಗಳ ಹಿಂದೆ ಶಿವಾನಂದ, ಕುಮಾರ ಹಾಗೂ ಕೆಂಪಮ್ಮಣ್ಣಿ ಎಂಬುವರು ಇದು ನಮ್ಮ ಜಮೀನೆಂದು ತಿಳಿಸಿ ಮನೆಗಳನ್ನ ಧ್ವಂಸಗೊಳಿಸಿ ಕುಟುಂಬಗಳನ್ನ ಬೀದಿಪಾಲು ಮಾಡಿದ್ದರು.

ಈ ವೇಳೆ ಎರಡು ಕುಟುಂಬಗಳು ಸಮೀಪದ ರಸ್ತೆ ಬದಿಯಲ್ಲಿ ತಾತ್ಕಾಲಿಕ ಶೆಡ್ ಗಳನ್ನ ನಿರ್ಮಿಸಿಕೊಂಡಿದ್ದಾರೆ. ತಮಗಾದ ಅನ್ಯಾಯವನ್ನ ಸರ್ಕಾರದ ಗಮನಕ್ಕೆ ತಂದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕಳೆದ 5 ತಿಂಗಳಿಂದ ಯಾವುದೇ ರಕ್ಷಣೆ ಇಲ್ಲದ ಶೆಡ್ ನಲ್ಲಿ ವಾಸವಿದ್ದಾರೆ. ಸಂತ್ರಸ್ಥರ ಮನವಿಗೆ ಸ್ಪಂದಿಸಿರುವ ಸಮಾಜ ಕಲ್ಯಾಣ ಇಲಾಖೆ, ಪ್ರಾದೇಶಿಕ ಆಯುಕ್ತರು ಹಾಗೂ ಮುಖ್ಯಮಂತ್ರಿಗಳ ಕಾರ್ಯಾಲಯ ಜಿಲ್ಲಾಡಳಿತಕ್ಕೆ ಪತ್ರ ಬರೆದು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಸಂತ್ರಸ್ಥ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದೆ.
ಆದ್ರೆ ಜಿಲ್ಲಾಡಳಿತವಾಗಲಿ ತಾಲ್ಲೂಕು ಆಡಳಿತವಾಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದೆ. ವಿವಿದ ಇಲಾಖೆಗಳಿಂದ ಪತ್ರಗಳಿಗೂ ಸ್ಪಂದಿಸದ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ವಿಳಂಬ ಧೋರಣೆ ಅನುಸರಿಸುತ್ತಿದೆ. ಖರಾಬು ಜಾಗದಲ್ಲಿದ್ದ ನಮ್ಮನ್ನ ಬೀದಿಪಾಲು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂಬುದು ಸಂತ್ರಸ್ಥ ಕುಟುಂಬಗಳ ಒತ್ತಾಯವಾಗಿದೆ. ಸರ್ವೆ ಅಧಿಕಾರಿಗಳು ನೆಪಮಾತ್ರಕ್ಕೆ ಬಂದು ಹೋಗುತ್ತಿದ್ದಾರೆ.
ಮೂರು ತಲೆಮಾರುಗಳಿಂದ ವಾಸವಿದ್ದ ಜಾಗ ಖರಾಬು ಜಮೀನಾ…? ಎಂಬ ಬಗ್ಗೆ ವರದಿ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಖರಾಬು ಜಮೀನಾಗಿದ್ದರೆ ಒತ್ತುವರಿ ಮಾಡಿಕೊಂಡವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಮೂರು ತಲೆಮಾರುಗಳಿಂದ ವಾಸ ಮಾಡುತ್ತಿದ್ದ ಹಂದಿಜೋಗಿ ಕುಟುಂಬಗಳಿಗೆ ನ್ಯಾಯ ಒದಗಿಸಬೇಕಿದೆ.

