ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಗೆ ಎರಡನೇ ಬಾರಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.

ನಗರ ಸಶಸ್ತ್ರ ಮೀಸಲು ಪಡೆಯ ವತಿಯಿಂದ ಏಳು ಪಿರಂಗಿ ಗಾಡಿಗಳ ಮೂಲಕ 21 ಬಾರಿ ಕುಶಾಲತೋಪು ಸಿಡಿಸಲಾಯಿತು. ತಾಲೀಮಿನಲ್ಲಿ ಅಶ್ವದಳದ ೪೫ ಕುದುರೆಗಳು ಹಾಗೂ ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವ, ಏಕಲವ್ಯ, ಶ್ರೀರಾಮ, ಗೋಪಿ, ಕಾವೇರಿ, ಲಕ್ಷ್ಮಿ, ಚೈತ್ರಾ, ರೂಪ, ಶ್ರೀಕಂಠ ಸೇರಿದಂತೆ 13 ಆನೆಗಳು ಭಾಗವಹಿಸಿದ್ದವು.

ಕುಶಾಲತೋಪಿನ ಭಾರೀ ಸದ್ದಿಗೂ ಗಜಪಡೆ ಹಾಗೂ ಅಶ್ವಪಡೆ ಯಾವುದೇ ಆತಂಕಕ್ಕೆ ಒಳಗಾಗದೆ ಶಾಂತವಾಗಿ ನಿಂತವು. ಮೊದಲ ಹಂತದ ತಾಲೀಮಿನಲ್ಲಿ ಶ್ರೀಕಂಠ ಮತ್ತು ಶ್ರೀರಾಮ ಆನೆಗಳು ಕೊಂಚ ವಿಚಲಿತವಾಗಿದ್ದವು. ಆದರೆ ಎರಡನೇ ಹಂತದ ತಾಲೀಮಿನಲ್ಲಿ ಶಬ್ದಕ್ಕೆ ಬೆದರದೆ ನಿಂತು ಗಮನ ಸೆಳೆದವು.

ದಸರಾ ಜಂಬೂಸವಾರಿಯ ಸಂದರ್ಭದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಸೇರಿದಂತೆ ಗಜಪಡೆಯ ಆನೆಗಳು ಕುಶಾಲತೋಪಿನ ಸದ್ದಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಈ ತಾಲೀಮು ನಡೆಸಲಾಗುತ್ತಿದೆ.