ಮೈಸೂರು: ಅರಮನೆ ಆವರಣದಲ್ಲಿ 10 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಚಾಲನೆ ನೀಡಿದರು. “ಅರಮನೆ ಫಲಪುಷ್ಪ ಪ್ರದರ್ಶನ-2025” ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ, ಬೊಂಬೆ ಮನೆ ಹಾಗೂ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂಕುಂಡಗಳನ್ನು ಇಡಲಾಗಿದ್ದು, ಗುಲಾಬಿ, ಸೇವಂತಿಗೆ, ಆಸ್ಟರ್, ಆಂಟಿನಂ, ಜಲಿಯ ಸಾಲ್ವಿಯ, ಚೆಂಡು ಹೂ, ಸೂರ್ಯಕಾಂತಿ, ಹೂವುಗಳು ಸೇರಿದಂತೆ ಹಲವು ಬಗೆಯ ಹೂವುಗಳನ್ನು ಇಲ್ಲಿ ಕಾಣಬಹುದಾಗಿದೆ. ಶೃಂಗೇರಿಯ ಶಾರದಾಂಬೆ ದೇಗುಲ, ಸಾಲುಮರದ ತಿಮ್ಮಕ್ಕ, ಮುಮ್ಮಡಿ ಕೃಷ್ಣರಾಜ ಒಡೆಯರ್, ಸಂವಿಧಾನ ಪೀಠಿಕೆ, ಕಾಳಿಂಗ ಮರ್ದನ , ಯುದ್ಧ ನೌಕೆಗಳು, ಮಹಿಳಾ ಕ್ರಿಕೆಟ್ ಚಾಂಪಿಯನ್ ಕಪ್, ಸೇರಿದಂತೆ ಇನ್ನೂ ಹಲವು ವಿಭಿನ್ನ ಮಾದರಿಯ ಕಲಾ ಕೃತಿಗಳು ಹೂವಿನಿಂದ ಅರಳಿಸಲಾಗಿದ್ದು, ಪ್ರತಿಕೃತಿಗಳ ತಯಾರಿಕೆಗೆ ಸುಮಾರು 25 ಲಕ್ಷಕ್ಕೂ ಹೆಚ್ಚು ಹೂಗಳ ಬಳಕೆ ಮಾಡಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯ ಆವರಣದಲ್ಲಿ ಮೈಸೂರು ಅರಮನೆ ಮತ್ತು ರಾಜ ಮನೆತನಗಳ ಇತಿಹಾಸ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಛಾಯಾಚಿತ್ರಗಳ ಪ್ರದರ್ಶನ ಹಾಗೂ ವಿವಿಧ ಬೊಂಬೆಗಳ ಪ್ರದರ್ಶನ ವೀಕ್ಷಕರನ್ನು ಆಕರ್ಷಿಸಿದವು.ಇದರ ಜೊತೆಗೆ ಅರಮನೆಯ ವರಾಹ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಯು ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬಂದಂತಹ ನೋಡುಗರ ಗಮನ ಸೆಳೆಯಿತು.

ಖ್ಯಾತ ಪಂಚಭಾಷಾ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ ಹಾಗೂ ಖ್ಯಾತ ಬಾಲಿವುಡ್ ಗಾಯಕಿ ವಿದೂಷಿ ಹಂಸಿಕಾ ಅಯ್ಯರ್ ಮತ್ತು ತಂಡದವರಿoದ ಆಯೋಜಿಸಲಾಗಿದ್ದ “ಸಂಗೀತ ಸಂಭ್ರಮ” ಕಾರ್ಯಕ್ರಮವು ನೆರೆದಿದ್ದಂತಹ ಸಾವಿರಾರು ವೀಕ್ಷಕರನ್ನು ತನ್ನತ್ತ ಸೆಳೆಯುವುದರ ಮೂಲಕ ಮಧುರವಾದ ಸಂಗೀತಕ್ಕೆ ಮನಸೋಲುವಂತೆ ಮಾಡಿತು.ಫಲಪುಷ್ಪ ಪ್ರದರ್ಶನ ಹಾಗೂ ಅರಮನೆ ದೀಪಾಲಂಕಾರವು ಡಿಸೆಂಬರ್ 21 ರಿಂದ 31 ರವರೆಗೆ ನಡೆಯಲಿದ್ದು, ಫಲಪುಷ್ಪ ಪ್ರದರ್ಶನವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಅರಮನೆ ವಿದ್ಯುತ್ ದೀಪಾಲಂಕಾರವು ಸಂಜೆ 7 ರಿಂದ 9 ರವರೆಗೆ ಇರಲಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ಜಿಲ್ಲಾಧಿಕಾರಿಗಳಾದ ಜಿ . ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಎಸ್. ಯುಕೇಶ್ ಕುಮಾರ್, ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಟಿ. ಎಸ್. ಸುಬ್ರಮಣ್ಯ, ಅವರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.