ನಂಜನಗೂಡು: ಗ್ರಾಮಸ್ಥರ ಉಪಯೋಗಕ್ಕಾಗಿ ನಿರ್ಮಿಸಿದ ಕಾಲುವೆಯನ್ನ ಪಕ್ಕದ ಜಮೀನಿನ ಮಾಲೀಕ ನೂತನ ಲೇಔಟ್ ನಿರ್ಮಾಣಕ್ಕಾಗಿ ಅನಾದಿಕಾಲದ ನಾಲೆಯನ್ನೇ ಮುಚ್ಚಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮುಚ್ಚಿದ ಕಾಲುವೆಯನ್ನ ತೆರುವುಗೊಳಿಸುವಂತೆ ಗ್ರಾಮಸ್ಥರು ನೀಡಿದ ಮನವಿಗೆ ತಹಶೀಲ್ದಾರ್ ಸ್ಪಂದಿಸಿದ್ದಾರೆ. ಕಣ್ಮುಚ್ಚಿ ಕುಳಿತ ನೀರಾವರಿ ಇಲಾಖೆಗೆ ಪತ್ರ ಬರೆದು ವರದಿ ನೀಡುವಂತೆ ತಿಳಿಸಿದ್ದಾರೆ. ಈ ಹಿನ್ನಲೆ ನೀರಾವರಿ ಇಲಾಖೆ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಂಜನಗೂಡು ಹುಲ್ಲಹಳ್ಳಿ ರಸ್ತೆ ರಾಜ್ಯ ಹೆದ್ದಾರಿ 57 ಸಮೀಪ ದೇಬೂರು ಗ್ರಾಮದ ಬಳಿ ನುಗು ನಾಲೆಗೆ ಹರಿದು ಬರುವ ಹೆಚ್ಚುವರಿ ನೀರು ಹುಲ್ಲಹಳ್ಳಿ ನಾಲೆಗೆ ಸೇರುವಂತೆ ನೀರಾವರಿ ಇಲಾಖೆಯಿಂದ ಕಾಲುವೆ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲೇ ಇರುವ ಸರ್ವೆ ನಂ.266 ರ ಮಾಲೀಕ ಮುಚ್ಚಿಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದರು.

ಮುಚ್ಚಿರುವ ನಾಲೆಯನ್ನ ತೆರುವುಗೊಳಿಸುವಂತೆ ತಹಶೀಲ್ದಾರ್ ಗೆ ಗ್ರಾಮಸ್ಥರು ಪತ್ರ ಬರೆದಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ನಂಜನಗೂಡು ತಹಶೀಲ್ದಾರ್ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ತಹಶೀಲ್ದಾರ್ ಪತ್ರಕ್ಕೆ ಸ್ಪಂದಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಗ್ರಾಮಸ್ಥರು ಅಧಿಕಾರಿಗಳಿಗೆ ಮುಚ್ಚಿರುವ ನಾಲೆಯನ್ನ ತೋರಿಸಿ ತೆರುವುಗೊಳಿಸುವಂತೆ ಮನವಿ ಮಾಡಿದ್ದಾರೆ.