ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮತ್ತೆ ಕಳ್ಳರ ಕೈ ಚಳಕ ಶುರುವಾಗಿದೆ. ಸೂರ್ಯೋದಯ ನಗರ ಬಡಾವಣೆಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದ ನಾಲ್ವರು ಮುಸುಕುಧಾರಿಗಳು ಕೃತ್ಯವೆಸಗಿದ್ದಾರೆ. ಶಿಕ್ಷಕ ದಂಪತಿ ಮನೆಗೆ ನುಗ್ಗಿದ ಖದೀಮರು ಸುಮಾರು 10 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಲ್ಲೂಕಿನ ದೇವರಾಯಶೆಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಜಯಪ್ರಕಾಶ್ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದೆ. ಜುಬಿಲಿಯೆಂಟ್ ಬಡಾವಣೆಯಲ್ಲಿ ಬಾಡಿಗೆಗೆ ಇದ್ದ ಜಯಪ್ರಕಾಶ್ ರವರು ಸೂರ್ಯೋದಯ ಬಡಾವಣೆಯ ಮನೆಗೆ ಬಾಡಿಗೆಗಾಗಿ ಬಂದಿದ್ದಾರೆ. ಗುರುವಾರ ನಗದು ಮತ್ತು ಚಿನ್ನಾಭರಣಗಳ ಸಮೇತ ಪೀಠೋಪಕರಣಗಳನ್ನ ಹೊಸಮನೆಗೆ ಶಿಫ್ಟ್ ಮಾಡಿದ್ದಾರೆ.

ಮರುದಿನ ಮನೆಗೆ ವಾಸಕ್ಕೆ ಬರಲು ನಿರ್ಧರಿಸಿ ಹಳೆ ಮನೆಯಲ್ಲಿ ರಾತ್ರಿ ಮಲಗಿದ್ದಾರೆ. ಬೆಳಿಗ್ಗೆ ಎದ್ದು ಹೊಸ ಮನೆಗೆ ತೆರಳಿದಾಗ ಬಾಗಿಲ ಬೀಗ ಮುರಿದು ಕೃತ್ಯ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೂ ಸಹ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ನಗದು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳ್ಳರು ದೋಚಿ, ಪರಾರಿಯಾಗಿದ್ದಾರೆ . ಆತಂಕವೆಂದರೆ ಕಳ್ಳರು ರಾತ್ರಿ ವೇಳೆ ಮಾರಕಾಸ್ತ್ರಗಳನ್ನ ಹಿಡಿದು ಹೊಂಚು ಹಾಕುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರಣಿ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕದ ಪೊಲೀಸರು..!
ಇತ್ತೀಚಿನ ಕೆಲಗಳಿಂದ ನಂಜನಗೂಡು ಪಟ್ಟಣದಲ್ಲಿ ನಿರಂತರವಾಗಿ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಒಬ್ಬಂಟಿ ಕುಟುಂಬಗಳು ವಾಸ ಮಾಡಲು ಬೆಚ್ಚಿ ಬೀಳುವ ವಾತಾವರಣವನ್ನು ಖದೀಮರು ಸೃಷ್ಟಿ ಮಾಡಿದ್ದಾರೆ. ಮುಸುಕು ದಾರಿಗಳ ವೇಷ ಧರಿಸಿ ಕೈಯಲ್ಲಿ ಲಾಂಗು ಮಚ್ಚುಗಳನ್ನು ಹಿಡಿದು ಖದೀಮರು ಆರ್ಭಟಿಸಿದರು. ನಂಜನಗೂಡು ಪೊಲೀಸರು ಬ್ರೇಕ್ ಹಾಕಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಸಾಕಷ್ಟು ಗಂಭೀರ ಪ್ರಕರಣಗಳು ನಂಜನಗೂಡಿನಲ್ಲಿ ನಡೆದಿದ್ದರೂ ಕೂಡ ಇದುವರೆಗೂ ಯಾವುದೇ ಪ್ರಕರಣವನ್ನು ಭೇದಿಸುವಲ್ಲಿ ವಿಫಲವಾಗಿರುವ ಪೊಲೀಸರ ಕಾರ್ಯ ವೈಕರಿ ವಿರುದ್ಧ ನಂಜನಗೂಡು ಜನತೆ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮನೆಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ವಿಫಲವಾಗಿದೆ ಎಂಬುದಕ್ಕೆ ಕಳ್ಳತನ ಪ್ರಕರಣಗಳು ಸಾಕ್ಷಿಯಾಗಿವೆ. ಇನ್ನಾದರೂ ಪೊಲೀಸ್ ಇಲಾಖೆ ಎತ್ತುಕೊಂಡು ಕಳ್ಳರನ್ನು ಪತ್ತೆ ಹಚ್ಚುವರೇ ಕಾದುನೋಡಬೇಕಿದೆ.

