ನಂಜನಗೂಡು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಮಧ್ಯೆ ರಾತ್ರಿ ಶ್ರೀ ಮಹದೇಶ್ವರಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿದೆ. ನಡುರಾತ್ರಿಯಲ್ಲೇ ರಥವನ್ನು ಎಳೆದು ಗ್ರಾಮಸ್ಥರು ಪುನೀತರಾದರು.

ಎರಡು ದಿನಗಳ ಕಾಲ ನಡೆಯುವ ಚುಂಚನಹಳ್ಳಿ ಶ್ರೀ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಮಧ್ಯರಾತ್ರಿ 12 ಗಂಟೆಯಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ರಥೋತ್ಸವವು ವಿಜೃಂಭಣೆಯಿಂದ ನಡೆದಿದೆ. ಚುಂಚನಹಳ್ಳಿ ಗ್ರಾಮದಲ್ಲಿ ರುದ್ರಾಕ್ಷಿ ಮಂಟಪದಲ್ಲಿ ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ಕುಳ್ಳಿರಿಸಿ, ವಿವಿಧ ಹೂಗಳಿಂದ ಶೃಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ನಂತರ ಮಹದೇವಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೂರ್ತಿಯನ್ನು ವಿವಿಧ ಬಗೆಯ ಬಟ್ಟೆಗಳ ಬಂಟಿಂಗ್ಸ್ ಮತ್ತು ಹೂವಿನಿಂದ ಅಲಂಕಾರ ಮಾಡಲಾಗಿದ್ದ ರಥಕ್ಕೆ ಪ್ರತಿಷ್ಠಾಪನೆ ಮಾಡಿ, ಇಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥವು ದೇವಾಲಯದ ಸುತ್ತಲು ಸಂಚರಿಸುವ ವೇಳೆ ಸುಮಾರು 15 ನಿಮಿಷಗಳ ಕಾಲ ರಥವು ಮುಂದೆ ಹೋಗದೆ ಸ್ಥಗಿತಗೊಂಡಿತ್ತು. ನಂತರ ಮುಂದೆ ಸಾಗಿ ಯಾವುದೇ ಅಡೆತಡೆ ಇಲ್ಲದೆ ರಥೋತ್ಸವವು ಸ್ವಾಸ್ಥಾನ ಬಂದು ತಲುಪಿತು. ಗ್ರಾಮಸ್ಥರು ಉಘೇ ಉಘೇ ಮಹದೇಶ್ವರ ಎಂದು ಜಯಘೋಷ ಕೂಗಿ ರಥ ಎಳೆದು ಭಕ್ತಿ ಭಾವ ಮೆರೆದರು.

ರಾತ್ರಿಯ ಸಮಯದಲ್ಲಿ ರಥೋತ್ಸವ ನಡೆಯುತ್ತಿರುವುದು. ಪುರ್ವಜರ ಕಾಲದಿಂದಲೂ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು, ಅದರಂತೆ ಈ ವರ್ಷವೂ ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ರಥೋತ್ಸವವನ್ನು ನಡೆಸಲಾಗುತ್ತದೆ. ಹಾಲರವಿ, ಕೊಂಡೋತ್ಸವ, ರಥೋತ್ಸವವನ್ನು ಮಾಡಲಾಗುತ್ತದೆ ಈ ಜಾತ್ರೆಗೆ ದೇವನೂರು, ವರಹಳ್ಳಿ ಗ್ರಾಮಗಳಿಂದ ದೇವರನ್ನು ತಂದು ಪೂಜಿಸಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಚುಂಚನಹಳ್ಳಿಯಲ್ಲಿ ರಾತ್ರಿಯ ಸಮಯದಲ್ಲಿ ರಥೋತ್ಸವ ಜರಗುವುದು ವಿಶೇಷವಾಗಿದೆ‌ ಎನ್ನುತ್ತಾರೆ ಗ್ರಾಮಸ್ಥರು.