ನಂಜನಗೂಡು: ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಮಧ್ಯೆ ರಾತ್ರಿ ಶ್ರೀ ಮಹದೇಶ್ವರಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿದೆ. ನಡುರಾತ್ರಿಯಲ್ಲೇ ರಥವನ್ನು ಗ್ರಾಮಸ್ಥರು ಪುನೀತರಾದರು. ಎರಡು ದಿನಗಳ ಕಾಲ ನಡೆಯುವ ಚುಂಚನಹಳ್ಳಿ ಶ್ರೀ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಮಧ್ಯರಾತ್ರಿ 12 ಗಂಟೆಯಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ರಥೋತ್ಸವವು ವಿಜೃಂಭಣೆಯಿಂದ ನಡೆದಿದೆ.

ಚುಂಚನಹಳ್ಳಿ ಗ್ರಾಮದಲ್ಲಿ ರುದ್ರಾಕ್ಷಿ ಮಂಟಪದಲ್ಲಿ ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ಕುಳ್ಳಿರಿಸಿ, ವಿವಿಧ ಹೂಗಳಿಂದ ಶೃಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಮಹದೇವಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೂರ್ತಿಯನ್ನು ವಿವಿಧ ಬಗೆಯ ಬಟ್ಟೆಗಳ ಬಂಟಿಂಗ್ಸ್ ಮತ್ತು ಹೂವಿನಿಂದ ಅಲಂಕಾರ ಮಾಡಲಾಗಿದ್ದ ರಥಕ್ಕೆ ಪ್ರತಿಷ್ಠಾಪನೆ ಮಾಡಿ, ಇಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥವು ದೇವಾಲಯದ ಸುತ್ತಲು ಸಂಚರಿಸುವ ವೇಳೆ ಕೆಲವು ನಿಮಿಷಗಳ ಕಾಲ ರಥವು ಮುಂದೆ ಹೋಗದೆ ಸ್ಥಗಿತಗೊಂಡಿತ್ತು. ನಂತರ ಮುಂದೆ ಸಾಗಿ ಯಾವುದೇ ಅಡೆತಡೆ ಇಲ್ಲದೆ ರಥೋತ್ಸವವು ಸ್ವಾಸ್ಥಾನ ಬಂದು ತಲುಪಿತು. ಗ್ರಾಮಸ್ಥರು ಉಘೇ ಉಘೇ ಮಹದೇಶ್ವರ ಎಂದು ಜಯಘೋಷ ಕೂಗಿ ರಥ ಎಳೆದು ಭಕ್ತಿ ಭಾವ ಮೆರೆದರು. ರಾತ್ರಿಯ ಸಮಯದಲ್ಲಿ ರಥೋತ್ಸವ ನಡೆಯುತ್ತಿರುವುದು.

ಪುರ್ವಜರ ಕಾಲದಿಂದಲೂ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು, ಅದರಂತೆ ಈ ವರ್ಷವೂ ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ರಥೋತ್ಸವವನ್ನು ನಡೆಸಲಾಗುತ್ತದೆ. ಚುಂಚನಹಳ್ಳಿಯಲ್ಲಿ ರಾತ್ರಿಯ ಸಮಯದಲ್ಲಿ ರಥೋತ್ಸವ ಜರಗುವುದು ವಿಶೇಷವಾಗಿದೆ.

ಜಾತ್ರೆಯೂ ಎರಡ್ಮೂರು ದಿನಗಳ ಹಿಂದೆ ಸುಮಾರು 50 ಅಡಿ ಎತ್ತರದ ರಥವನ್ನು ಬಣ್ಣ ಬಣ್ಣದ ಬಟ್ಟೆ, ವಿವಿಧ ಬಗೆಯ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು. ಸೋಮವಾರ ಸಂಜೆ 5 ಗಂಟೆಗೆ ರಥೋತ್ಸವಕ್ಕೆ ಪೂಜೆಯನ್ನು ಸಲ್ಲಿಸಿ ರಥಕ್ಕೆ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಸೋಮವಾರ ರಾತ್ರಿ ಶ್ರೀ ಕಡಕಲಕಟ್ಟೆ ಮಠದಿಂದ ಮಹದೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಇರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಿ, ನಂತರ ಚುಂಚನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಾಲಯಕ್ಕೆ ದೇವರ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿದ ನಂತರ ಮಧ್ಯರಾತ್ರಿಯಲಿ ವಿಜೃಂಭಣೆಯಿಂದ ರಥೋತ್ಸವವನ್ನು ನಡೆಸಲಾಯಿತು.

ಮಂಗಳವಾರ ಮುಂಜಾನೆ ಶ್ರೀ ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಶ್ರೀ ಮಹದೇಶ್ವರ ಸ್ವಾಮಿಯ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಲರವಿ ಉತ್ಸವ ಮಾಡಿ, ಮಹದೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಾಲಯಕ್ಕೆ ತರಲಾಯಿತು. ಈ ವೇಳೆ ದೇವಾಲಯದ ಮುಂಭಾಗದಲ್ಲಿ ಹಾಕಿದ್ದ ಕೊಂಡೋತ್ಸವದಲ್ಲಿ ಕೊಂಡವನ್ನು ಹಾಯ್ದು ಹರಕೆ ತೀರಿಸಿದರು.

ನಂತರ ದೇವಾಲಯದ ಸುತ್ತಲೂ ಹುಲಿವಾಹನೋತ್ಸವವನ್ನು ಹೊತ್ತು ಮೆರವಣಿಗೆ ಮಾಡಲಾಯಿತು. ನಂತರ ಮಧ್ಯಾಹ್ನ 3 ಗಂಟೆಗೆ ಮತ್ತೊಮ್ಮೆ ರಥದಲ್ಲಿ ಶ್ರೀ ಮಹದೇಶ್ವರಸ್ವಾಮಿಯ ಉತ್ಸವ ಮೂರ್ತಿ ಯನ್ನು ಇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವನ್ನು ದೇವಸ್ಥಾನದ ಸುತ್ತಲೂ ಎಳೆದು ಭಕ್ತರು ಹೆಣ್ಣು ಜವನ ಎಸೆದು ಭಕ್ತಿಭಾವ ಮೆರೆದರು. ರಥವು ಯಾವುದೇ ಅಡೆತಡೆ ಇಲ್ಲದೆ ಸ್ವಸ್ಥಾನಕ್ಕೆ ಬಂದು ತಲುಪಿತು. ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ. ಬಸವರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.