ಮೈಸೂರು: ತೇಗ ಮರದ ದಿಮ್ಮಿಯನ್ನು ಮಣ್ಣಿನಡಿಯಲ್ಲಿ ಹೂತಿಟ್ಟಿದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಅಧಿಕಾರಿಗಳು ಅದನ್ನು ಹೊರತೆಗೆದು ವಶಕ್ಕೆ ಪಡೆದುಕೊಂಡಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ವ್ಯಾಪ್ತಿಯಯ ಮುದಗನೂರಿನ ತೋಟದಲ್ಲಿ ನಡೆದಿದೆ.

ಮುದಗನೂರಿನ ನಿವಾಸಿ ಗಿರೀಶ್ ಎಂಬುವರು ತಮ್ಮ ತೋಟದಲ್ಲಿ ತೇಗ ಮರದ ದಿಮ್ಮಿಯನ್ನು ಹೂತಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸ್ ಟಿಪಿಎಫ್ ತಂಡ ತೋಟದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಪತ್ತೆ ಹಚ್ಚಿ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ತೆರಳಿ ಮಣ್ಣಿನಲ್ಲಿ ಒಂದು ಮೀ. ದಪ್ಪ ಹಾಗೂ 2.30.ಮೀ. ಉದ್ದದ ತೇಗದ ದಿಮ್ಮಿಯನ್ನು ಮಣ್ಣಿನಲ್ಲಿ ಹೂತು ತೆಂಗಿನ ಗರಿಗಳಿಂದ ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

ಈ ಮರದ ದಿಮ್ಮಿಯನ್ನು ವಶಕ್ಕೆ ಪಡೆದಿರುವ ಅರಣ್ಯ ಅಧಿಕಾರಿಗಳು ನಾಪತ್ತೆಯಾಗಿರುವ ತೋಟದ ಮಾಲೀಕ ಗಿರೀಶ್ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಇದರಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯಿದ್ದು ತನಿಖೆ ನಡೆಸುತ್ತಿರುವುದಾಗಿ ಆರ್ ಎಫ್ ಒ ನಂದಕುಮಾ‌ರ್ ತಿಳಿಸಿದ್ದಾರೆ.