ನಂಜನಗೂಡು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಹೆಸರಲ್ಲಿ ಬಡಕುಟುಂಬಗಳನ್ನ ಬೀದಿಪಾಲು ಮಾಡುವ ಹುನ್ನಾರ ನಂಜನಗೂಡು ತಾಲ್ಲೂಕು ಇಮ್ಮಾವು ಗ್ರಾಮದ ಸಾಬರಹುಂಡಿ ಗ್ರಾಮದಲ್ಲಿ ನಡೆಯುತ್ತಿದೆ.

ನಾಲ್ಕಾರು ತಲೆಮಾರುಗಳಿಂದ ವಾಸ ಮಾಡುತ್ತಿರುವ ಮುಸ್ಲಿಂ ಬಡಕುಟುಂಬಗಳನ್ನ ಒಕ್ಕಲೆಬ್ಬಿಸುವ ಬೆಳವಣಿಗೆ ಕಂಡುಬರುತ್ತಿದೆ. ರಾತ್ರೋ ರಾತ್ರಿ ಎತ್ತಂಗಡಿ ಮಾಡಲು ಯತ್ನಿಸುತ್ತಿರುವ ಅಧಿಕಾರಿಗಳ ವರ್ತನೆಗೆ ಬೇಸತ್ತ ನಿವಾಸಿಗಳು ನ್ಯೂಸ್ ಕರ್ನಾಟಕ ಸುದ್ದಿ  ವಾಹಿನಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಒಟ್ಟು 53.08 ಎಕ್ರೆ ಪ್ರದೇಶದಲ್ಲಿ ಇಮ್ಮಾವು ಗ್ರಾಮದ ಸಾಬರಹುಂಡಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ನಿವಾಸಿಗಳು ಪೂರ್ವಿಕರ ಕಾಲದಿಂದಲೂ ಉಳುಮೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ರಾತ್ರೋ ರಾತ್ರಿ ಜೆಸಿಬಿ ತಂದು ಪೊಲೀಸರ ಸಮ್ಮುಖದಲ್ಲಿ ಮನೆಗಳನ್ನ ಕೆಡವಲು ಮುಂದಾಗಿದ್ದಾರೆ. ಈ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ಸುದ್ದಿವಾಹಿನಿಯಲ್ಲಿ ಸುದ್ದಿಯನ್ನು ಬಿತ್ತಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಸ್ಥಳಕ್ಕೆ ಧಾವಿಸಿದ್ದಾರೆ.

ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು. ಮೇಲಾಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ನಾವು ನಮ್ಮ ತಾತ ಮುತ್ತಾತನ ಕಾಲದಿಂದಲೂ ಇದೇ ಸ್ಥಳದಲ್ಲಿ ವಾಸವಿದ್ದೇವೆ. ನಾವು ಈ ಜಾಗವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.