ನಂಜನಗೂಡು: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕೆಂದು ಕೆವಿಐಸಿ ಸಹಾಯಕ ನಿರ್ದೇಶಕ ಲಿಂಗದೊರೆ ತಿಳಿಸಿದರು.

ನಗರದ ಗೌರಿಘಟ್ಟ ಬೀದಿಯಲ್ಲಿರುವ ನಾಯಕರ ಭವನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಟೈಲರಿಂಗ್, ಅಗರಬತ್ತಿ, ಮಡಿಕೆ ಮಾಡುವುದು ಸೇರಿದಂತೆ ಹಲವು ಗ್ರಾಮೀಣ ಭಾಗದ  ಕೆಲಸಗಳನ್ನು ಉತ್ತೇಜಿಸುವ ಹಿನ್ನೆಲೆ ತಾಲ್ಲೂಕಿನ ಜನತೆಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮಗಳಲ್ಲಿರುವ ಸ್ವಯಂ ಉದ್ಯೋಗದ ಬಗ್ಗೆ ಅರಿವು ಮೂಡಿಸಿ, ಅವರು ಮಾಡುತ್ತಿರುವ ಕೆಲಸ ಕಾರ್ಯಗಳಿಗೆ ಬೇಕಾಗಿರುವ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಜೊತೆಗೆ ಇನ್ನು ಹೆಚ್ಚಿನ ದೊಡ್ಡಮಟ್ಟದ  ಕೆಲಸಗಳನ್ನು ಮಾಡುತ್ತಿದ್ದರೆ ಬ್ಯಾಂಕುಗಳ ಮೂಲಕ ಸಹಾಯಧನವನ್ನು  ಪಡೆದುಕೊಂಡು ಸ್ವಂತ ಉದ್ಯೋಗವನ್ನು ಕಟ್ಟಿಕೊಳ್ಳುವ ಹಿನ್ನೆಲೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಇದರ ಸದುಪಯೋಗವನ್ನು ತಾಲ್ಲೂಕಿನ ಜನತೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆವಿಐಸಿ ರಾಜ್ಯ ನಿರ್ದೇಶಕ ಬಸವರಾಜು, ಶ್ರೀ ಗಂಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ಕಾರ್ಯದರ್ಶಿ ದಿವ್ಯಶ್ರೀ, ಕುಂಬರಹಳ್ಳಿ ಮಹೇಶ್, ಹೆಡತಲೆ ರಂಗಸ್ವಾಮಿ, ಸಿಂಧುವಳ್ಳಿ ಗ್ರಾ ಪಂ ಅಧ್ಯಕ್ಷ ವಣಕಾರನಾಯಕ, ಮಹೇಶ್, ಮಹದೇವ ನಾಯಕ ಸೇರಿದಂತೆ ತಾಲ್ಲೂಕಿನ 125 ಮಹಿಳೆಯರು ಹಾಗೂ 80 ಪುರುಷರು ತರಬೇತಿಯಲ್ಲಿ ಭಾಗವಹಿಸಿದ್ದರು.