ನಂಜನಗೂಡು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಕಟ್ಟಕಡೆಯ ಮನುಷ್ಯನಿಗೂ ತಲುಪಿಸಬೇಕು ಇದು ನಮ್ಮ ಉದ್ದೇಶವಾಗಿದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.

ನಂಜನಗೂಡು ತಾಲ್ಲೂಕಿನ ಕೋಣನೂರು ಪಾಳ್ಯ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನೂತನ ನ್ಯಾಯ ಬೆಲೆ ಅಂಗಡಿಯನ್ನು ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರು ಶ್ರೀ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿದರು.

ಕೋಣನೂರು ಪಾಳ್ಯ ಮತ್ತು ಕೋಣನಪುರ ಗ್ರಾಮಗಳ ಗ್ರಾಮಸ್ಥರಿಗೆ ಪಡಿತರ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿ, ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅಧಿಕಾರಿಗಳು ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. ಅದರಂತೆ ಇಂದು ಕೋಣನಪುರ ಮತ್ತು ಕೋಣನೂರು ಪಾಳ್ಯ ಗ್ರಾಮಸ್ಥರಿಗೆ ನ್ಯಾಯ ಬೆಲೆ ಅಂಗಡಿಯನ್ನು ತೆರೆದು ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ.

ಎರಡು ಗ್ರಾಮಗಳ ಗ್ರಾಮಸ್ಥರು, ಕೋಣನೂರು ಅಥವಾ ದೊಡ್ಡಕವಲಂದೆಗೆ ನಡೆದುಕೊಂಡು ಹೋಗಿ ಪಡಿತರ ಆಹಾರ ಪದಾರ್ಥಗಳನ್ನು ಪಡೆದುಕೊಂಡು ಬರಬೇಕಿತ್ತು. ಸುಮಾರು ಐದು ಕಿಲೋಮೀಟರ್ ದೂರದ ತನಕ ನಡೆದುಕೊಂಡು ಹೋಗಿ ರೇಷನ್ ಪಡೆದುಕೊಳ್ಳುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವಸಂತಕುಮಾರ್ ರವರು ನನ್ನ ಗಮನಕ್ಕೆ ತಂದಿದ್ದರು. ಆಹಾರ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗಿತ್ತು. ಗ್ರಾಮಸ್ಥರಿಗೆ ಪಡಿತರ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು ತೊಂದರೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ಆಹಾರ ಪದಾರ್ಥಗಳನ್ನು ಆ ಗ್ರಾಮದಲ್ಲಿಯೇ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದ್ದೆ.

ಅದರಂತೆ ಇಂದು ಗ್ರಾಮದಲ್ಲಿ ಎರಡು ಗ್ರಾಮಗಳ ಕುಟುಂಬಗಳನ್ನು ಒಳಗೊಂಡಂತೆ ಸುಮಾರು 250ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರತಿ ತಿಂಗಳು ಇದೇ ಗ್ರಾಮದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರಿಗೆ ಗ್ರಾಮಸ್ಥರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೋಣನೂರು ಗ್ರಾ.ಪಂ ಅಧ್ಯಕ್ಷ ವಸಂತಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಗ್ರಾಮ ಲೆಕ್ಕಾಧಿಕಾರಿ ಸಿದ್ದಾರ್ಥ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಸವಣ್ಣ, ಕಾರ್ಯದರ್ಶಿ ಪರಶಿವಪ್ಪ, ಗ್ರಾಪಂ ಸದಸ್ಯ ಚಿನ್ನಣ್ಣ, ಮುಖಂಡರಾದ ಮಹದೇವಸ್ವಾಮಿ, ರಾಮದಾಸ್, ಡಿ.ತಿಮ್ಮಪ್ಪ, ರಾಮು, ಡಿ.ರಾಜು, ಗುರುವಾಬೋವಿ ಸೇರಿದಂತೆ ಹಲವರು ಭಾಗವಹಿಸಿದ್ದರು.