ನಂಜನಗೂಡು: ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದ್ದು, ರೈತರನ್ನು ಕಛೇರಿಯಿಂದ ಕಛೇರಿಗೆ ಅಲೆದಾಡಿಸುತ್ತಿದ್ದಾರೆ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆಗ್ರಹಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಂಜನಗೂಡು ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಜಮಾಯಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ರಾಜ್ಯಾಧ್ಯಕ್ಷ ಹಾಡ್ಯ ರವಿ ನೇತೃತ್ವದಲ್ಲಿ ನೂರಾರು ರೈತರು, ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ತಾಲ್ಲೂಕು ಆಡಳಿತದ ಭವನದ ವರೆಗೆ ಬೃಹತ್ ಪಾದಯಾತ್ರೆ ನಡೆಸಿದರು. ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾವನೆಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ರಾಜ್ಯಾಧ್ಯಕ್ಷ ಹಾಡ್ಯ ರವಿ ಮಾತನಾಡಿ, ತಾಲೂಕು ಕಚೇರಿಯಲ್ಲಿ ಯಾವುದೇ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅಧಿಕಾರಿಗಳು ಸಾರ್ವಜನಿಕರನ್ನು ಕಛೇರಿಯಿಂದ ಕಛೇರಿಗೆ ಅಲೆದಾಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಎಫ್ಆರ್‌ಪಿ ದರವನ್ನು 10.25 ಸಕ್ಕರೆ ಇಳುವರಿಗೆ ಅವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದು ಇದನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲನೆ ನಡೆಸಿ ಒಂದು ಟನ್ ಕಬ್ಬಿಗೆ 4,500 ರೂ.ಗಳನ್ನು ಮುಂಗಡವಾಗಿ ನೀಡಬೇಕು. ಸಕ್ಕರೆ ಇಳುವರಿಗೆ ಅವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಿದ್ದು ಇದನ್ನು ಪುನರ್ ಪರಿಶೀಲನೆ ನಡೆಸಬೇಕು.

ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡಿ ಕಾರ್ಖಾನೆಗಳಿಗೆ ಸೂಚಿಸಬೇಕು. ಸಕ್ಕರೆ ಇಳುವರಿಯಲ್ಲಿ ಮೋಸ ನಡೆಯುತ್ತಿದ್ದು ಅದನ್ನು ತಪ್ಪಿಸಲು ತಾಲ್ಲೂಕು ಮಟ್ಟದಲ್ಲಿ ಸಕ್ಕರೆ ಅಂಶವನ್ನು ಪರಿಶೀಲಿಸಲು ಪ್ರಯೋಗಾಲಯವನ್ನು ಸ್ಥಾಪಿಸಬೇಕು.ಕಾರ್ಖಾನೆಗಳ ಮುಂಭಾಗ ತೂಕದ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಹುಲ್ಲಹಳ್ಳಿ ಭಾಗದ ಹುರ ಏತ ನೀರಾವರಿ ಯೋಜನೆಯು ಅಂಬಳೆ, ಮಲ್ಕುಂಡಿ, ಹಗಿನವಾಳು, ಸೂರಹಳ್ಳಿ,, ವಳಗೆರೆ, ಲಕ್ಷ್ಮಣಪುರ, ಯಲಚಗೆರೆ, ಕೂಗಲೂರು, ಕಸುವಿನಹಳ್ಳಿ, ಸಿಂಧುವಳ್ಳಿ, ಸಿಂಧುವಳ್ಳಿಪುರ ಈ ಭಾಗದ 26 ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಕುಂಠಿತವಾಗಿದ್ದು, ಇದನ್ನು ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಬೇಕು.

ಕೇಂದ್ರ ಸರ್ಕಾರ ರಸಗೊಬ್ಬರದ ಮೇಲೆ ಬೆಲೆ ಏರಿಕೆ ಮಾಡಿರುವುದನ್ನು ಕೂಡಲೇ ವಾಪಸ್ ಪಡೆದು ಎಫ್ಐಡಿ ಲಿಂಕನ್ನು ತೆಗೆದು ಎಲ್ಲಾ ರೈತರಿಗೂ ಸಂಪೂರ್ಣ ರಸಗೊಬ್ಬರ ಪೂರೈಸಬೇಕು ಕೃಷಿಗಳಿಗೆ ಅಕ್ರಮ ಸಕ್ರಮ ಮುಂದುವರಿಸಬೇಕು. ಹಾಗೂ ವಿದ್ಯುತ್ ಖಾಸಗೀಕರಣ ಮಾಡಲು ಸರ್ಕಾರ ಹುನ್ನಾರ ನಡೆಸುತ್ತಿದ್ದು, ತಕ್ಷಣವೇ ಕೈಬಿಡಬೇಕು. ನಂಜನಗೂಡು ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದ್ದು, ರೈತರ ಪೌತಿ ಖಾತೆ, ಪೋಡಿ ಮಾಡುವುದು, ಬೀಳು ರೆಸ್ಟೋರ್ ಮಾಡುವುದು ಇನ್ನೂ ಇತ್ಯಾದಿ ರೈತರ ಕೆಲಸಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕಛೇರಿಯಿಂದ ಕಛೇರಿಗೆ ಅಲೆದಾಡಿಸುತ್ತಿರುವುದನ್ನು ತಪ್ಪಿಸಿ ತಾಲ್ಲೂಕು ದಂಡಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಲ್ಲದೆ ತಾಲ್ಲೂಕಿನಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ರೈತರಿಗೆ ಕಿರುಕುಳ ನಡೆಯುತ್ತಿದ್ದಾರೆ. ಕೂಡಲೇ ಖಾಸಗಿ ಫೈನಾನ್ಸ್ ವ್ಯವಸ್ಥಾಪಕರನ್ನು ಸಭೆ ಕರೆದು ರೈತರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮರಿಸ್ವಾಮಪ್ಪ, ಸಿದ್ದರಾಜಪ್ಪ, ದೇವರಾಜು, ರವಿ, ಶಿವಣ್ಣ, ಮಹದೇವಸ್ವಾಮಿ, ಕುಮಾರ್, ವಸಂತ, ಲೋಕೇಶ್, ಮಹೇಶ್, ವೃಷಬೇಂದ್ರಪ್ಪ, ಮಹದೇವಪ್ಪ, ಮಂಜು, ಜೀವನ್, ಮದನ್, ಕೆಂಪಣ್ಣ, ಹರ್ಷ, ಪ್ರಭುಸ್ವಾಮಿ, ಸಿದ್ದೇಶ್, ಸೋಮಣ್ಣ ಜಗದೀಶ್ ವಿಶ್ವ ಗಣೇಶ್ ಸೇರಿದಂತೆ ರೈತರು ಹಾಜರಿದ್ದರು.