ನಂಜನಗೂಡು: ಕಾಡಿನಿಂದ ತಪ್ಪಿಸಿಕೊಂಡು ಬಂದ ಜಿಂಕೆಯೊಂದು ಬೀದಿ ನಾಯಿಗಳ ದಾಳಿಗೆ ಒಳಗಾದ ಘಟನೆ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ. ಯುವಕರ ತಂಡ ತಕ್ಷಣ ಸ್ಪಂದಿಸಿ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಹೆಡತಲೆ ಗ್ರಾಮದ ಹೊರವಲಯದ ಹೊಲದ ಕಡೆಗೆ ಕಾಡಿನಿಂದ ಜಿಂಕೆಯೊಂದು ನಾಡಿಗೆ ನುಗ್ಗಿದೆ. ಜಿಂಕೆಯನ್ನು ಕಂಡ ಬೀದಿ ನಾಯಿಗಳ ಗುಂಪು ಹಿಂಬಾಲಿಸಿ ದಾಳಿ ನಡೆಸಿದೆ. ನಾಯಿಗಳು ಜಿಂಕೆಯ ಕಣ್ಣು, ತಲೆ, ಹೊಟ್ಟೆ, ಕುತ್ತಿಗೆ ಭಾಗವನ್ನು ಕಚ್ಚಿರುವ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿವೆ. ನಾಯಿಗಳಿಂದ ಜಿಂಕೆ ತಪ್ಪಿಸಿಕೊಳ್ಳಲು ನೆಲದ ಬಾವಿಗೆ ಬಿದ್ದಿದೆ. ಇದನ್ನು ಕಂಡ ಸ್ಥಳೀಯ ಯುವಕರು ಸ್ಥಳಕ್ಕೆ ಧಾವಿಸಿ ಕಲ್ಲು, ಕೋಲುಗಳ ಸಹಾಯದಿಂದ ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ.
ಆಗಾಗ್ಗೆ ಜಿಂಕೆ ಕಾಡಿನಿಂದ ಹೊಲ-ಗದ್ದೆಗಳ ಕಡೆಗೆ ಬರುತ್ತಿದ್ದರೂ, ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದು ಸಾಕಷ್ಟು ಪ್ರಕರಣಗಳು ನಡೆದಿದೆ. ಯುವಕರು ತಕ್ಷಣ ನಂಜನಗೂಡು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡ ಜಿಂಕೆಯನ್ನು ಪ್ರಥಮ ಚಿಕಿತ್ಸೆ ನೀಡಿ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಿದ್ದಾರೆ. ಜಿಂಕೆಯನ್ನು ರಕ್ಷಿಸಿದ ಯುವಕರ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
-ಸಿ.ಎಂ ಸುಗಂಧರಾಜು ಮೈಸೂರು.

