ಮೈಸೂರು: ಕಳೆದ ಎರಡು ತಿಂಗಳಿನಲ್ಲಿ ಮೈಸೂರು ನಗರ ಪೊಲೀಸರು ನಡೆಸಿದ ಬೃಹತ್‌ ಕಾರ್ಯಾಚರಣೆಯಲ್ಲಿ ಒಟ್ಟು 42 ಸ್ವತ್ತು ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಮೈಸೂರು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಅವರು, ಒಟ್ಟು 42 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ 63 ಲಕ್ಷ ಮೌಲ್ಯದ ಕಳವು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 19 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

63 ಲಕ್ಷ ಮೌಲ್ಯದ ಸ್ವತ್ತುಗಳಲ್ಲಿ 659 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ, 27 ದ್ವಿಚಕ್ರ ವಾಹನಗಳು, 1 ಕಾರು, 2,57,000 ನಗದು, ಮತ್ತು 1 ಲ್ಯಾಪ್‌ ಟಾಪ್‌ ಸೇರಿವೆ.8 ಸರಗಳ್ಳತನ ಪ್ರಕರಣಗಳು, 2 ಮನೆಗಳ್ಳತನ ಪ್ರಕರಣಗಳು, 1 ಮನೆ ಕೆಲಸದವರಿಂದ ಕಳ್ಳತನ ಪ್ರಕರಣ, 28 ವಾಹನ ಕಳ್ಳತನ ಪ್ರಕರಣಗಳು, 3 ಸಾಮಾನ್ಯ ಕಳ್ಳತನ ಪ್ರಕರಣಗಳನ್ನು ಬೇಧಿಸಿದ್ದಾರೆ.

ಇನ್ನು ಪೊಲೀಸರು ಮಾದಕ ವಸ್ತುಗಳ ವಿರುದ್ಧವೂ ಕಾರ್ಯಾಚರಣೆ ನಡೆಸಿದ್ದು, 11 ಎನ್‌ಡಿಪಿಎಸ್‌ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ 65 ಕೆಜಿ 800 ಗ್ರಾಂ ಗಾಂಜಾ ಹಾಗೂ 23 ಗ್ರಾಂ ಎಂಡಿಎಂಎ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಳ್ಳಲಾದ ವಸ್ತುಗಳನ್ನ ಮಾಲೀಕರಿಗೆ ಹಿಂದಿರುಗಿಸುವ ಕಾರ್ಯಕ್ಕೂ ಪೊಲೀಸ್ ಆಯುಕ್ತರು ಚಾಲನೆ ನೀಡಿದರು.