ನಂಜನಗೂಡು: ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಗ್ರಾಮ ಪಂಚಾಯಿತಿಯ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಕಸ ಕಡ್ಡಿಗಳಿಂದ ಕೊಳಚೆ ನೀರಿನಿಂದ ತುಂಬಿ ದುರ್ನಾತ ಬೀರುತ್ತಿವೆ. ಕಳೆದ ನಾಲ್ಕು ತಿಂಗಳಿಂದ ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮತ್ತು ಚರಂಡಿಯನ್ನು ಸ್ವಚ್ಛತೆ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ದೊಡ್ಡಕವಲಂದೆ, ಗಟ್ಟವಾಡಿ, ಗಟ್ಟವಾಡಿಪುರ, ಹರಗನಪುರ, ಹೆಳವರಹುಂಡಿ, ಕೃಷ್ಣಾರಾಜಪುರ ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಚರಂಡಿಗಳೆಲ್ಲವೂ ತುಂಬಿ ತುಳುಕುತ್ತಿವೆ. ಕೊಳಚೆ ಚರಂಡಿ ನೀರಿನ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿವಾಸಿಗಳಿಗೆ ಈಗಾಗಲೇ ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿದೆ. ದೊಡ್ಡ ಕವಲಂದೆ ಗ್ರಾಮದ ಸರ್ವೆ ನಂಬರ್ 237 ರಲ್ಲಿ 4.31 ಗುಂಟೆ ಸರ್ಕಾರಿ ಜಮೀನನ್ನು ಕಸ ವಿಲೇವಾರಿ ಘಟಕ ತೆರೆಯಲು ಗುರುತಿಸಲಾಗಿದೆ. ಆದರೆ ಆ ಜಮೀನಿನ ಜಾಗವನ್ನು ಅಕ್ಕ ಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು, ಇನ್ನುಳಿದ ಸರ್ಕಾರಿ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ.

ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಸದ ಸಮಸ್ಯೆ ಎದುರಾಗಿದ್ದು, ನಮಗೆ ಕಸ ವಿಲೇವಾರಿ ಘಟಕ ಮಾಡಲು ಸರ್ಕಾರಿ ಜಾಗವನ್ನು ನೀಡದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಕೂಡಲೇ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಾಗ ನೀಡಬೇಕು. ಒತ್ತುವರಿಯಾಗಿರುವ ಜಮೀನನ್ನು ತೆರವು ಕಾರ್ಯಾಚರಣೆ ಮಾಡಬೇಕು. ಇಲ್ಲವಾದಲ್ಲಿ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಕಸ ಸುರಿದು ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.