ಮೈಸೂರು: ಸಂಚಾರ ನಿಯಮ ಉಲ್ಲಂಘನೆ ದಂಡ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬೈಕ್ ನಂಬರ್ ಪ್ಲೇಟ್ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿದ್ದ ಸವಾರ ಪೊಲೀಸರ ಅತಿಥಿಯಾಗಿದ್ದಾನೆ. ಅಜೀಜ್ ಸೇಠ್ ನಗರದ ನಿವಾಸಿ ಶೇಕ್ ಮಜರ್ ಅಹ್ಮದ್ ಸಿಕ್ಕಿಬಿದ್ದ ಸವಾರ.ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ಯಮಾಹಾ ಲಿಬರೋ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಜೋಸೆಫ್ ಜಂಕ್ಷನ್ ಬಳಿ ವಿವಿಪುರಂ ಸಂಚಾರಿ ಠಾಣಾ ಸಿಬ್ಬಂದಿ ಮೋಹನ್ ರವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಿಗ್ನಲ್ ಲೈಟ್ ಬಳಿ ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ಬೈಕ್ ನಿಂತಿದೆ.KA09 EF 5884 ನೊಂದಣಿ ಸಂಖ್ಯೆಯ 5884 ನಂಬರ್ ಗಳ ಮೇಲೆ ಸ್ಟಿಕ್ಕರ್ ಅಂಟಿಸಿರುವುದು ಕಂಡುಬಂದಿದೆ.

ಪರಿಶೀಲನೆ ನಡೆಸಿದಾಗ ಎರಡೂ ಬದಿಯ ನಂಬರ್ ಪ್ಲೇಟ್ ಮೇಲೂ ಸಹ ಸ್ಟಿಕ್ಕರ್ ಅಂಟಿಸಿರುವುದು ಬೆಳಕಿಗೆ ಬಂದಿದೆ.ಬೈಕ್ ಸವಾರ ಮಜರ್ ಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಿಲ್ಲ.ವಾಹನ ಹಾಗೂ ಸವಾರನನ್ನ ವಶಕ್ಕೆ ಪಡೆದ ಸಿಬ್ಬಂದಿ ಮೋಹನ್ ರವರು ಜಯಲಕ್ಷ್ಮಿಪುರಂ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ.