ನಂಜನಗೂಡು: ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮೀಜಿಗಳ 110ನೇ ಜಯಂತೋತ್ಸವವನ್ನು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಹುಲ್ಲಹಳ್ಳಿ ಗ್ರಾಮದಲ್ಲಿ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ಶಾಂತ ಮಲ್ಲಿಕಾರ್ಜುನ ಕ್ಷೇತ್ರದ ವಿರಕ್ತ ಮಠದ ಶ್ರೀ ಇಮ್ಮಡಿ ಚೆನ್ನಮಲ್ಲದೇಶಿ ಕೇಂದ್ರ ಸ್ವಾಮೀಜಿಗಳು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು , ಪ್ರತಿಯೊಬ್ಬರಿಗೂ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ 1962 ರಲ್ಲಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಈಗ ಜೆಎಸ್ಎಸ್ ಸಂಸ್ಥೆಯು ಇಡೀ ದೇಶಾದ್ಯಂತ ಹಾಗೂ ವಿದೇಶದಲ್ಲೂ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಈ ಭಾಗದ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರೆ ಅದಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಶಿಕ್ಷಣ ಕ್ರಾಂತಿ ಎಂದು ಹೇಳಿದರು.

ಶ್ರೀಗಳ ಪುತ್ತಳಿರುವ ರಥವು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ನಂದಿ ಕಂಬ, ವೀರಗಾಸೆ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಸೋಮಶೇಖರ್, ರೇವಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್, ಮುಖಂಡರಾದ ಮಾದಪ್ಪ, ಮಲ್ಲಣ್ಣ, ಮಹದೇವಸ್ವಾಮಿ, ಚಂದ್ರಶೇಖರ್, ಮುಖ್ಯ ಶಿಕ್ಷಕಿ ಶೈಲಜಾ, ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.