ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿಂದು ಶ್ರೀ ಶಂಕರ ರಾಮಾನುಜಾಚಾರ್ಯರ ಜಯಂತಿಯನ್ನು ವೈಶಿಷ್ಟಪೂರ್ಣವಾಗಿ ಆಚರಿಸಲಾಯ್ತು. ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಸಮಾಜದಿಂದ ತೊಡೆದು ಹಾಕಿದ ಪ್ರಥಮ ಆಚಾರ್ಯರೇ ಶ್ರೀ ರಾಮಾನುಜಾಚಾರ್ಯರು.
ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ ಮಹಾಮಹಿಮ, ಶ್ರೀ ಶಂಕರ ರಾಮಾನುಜಾಚಾರ್ಯರ ಜಯಂತಿಯನ್ನು ಮಕ್ಕಳು, ಮಹಿಳೆಯರು ಸೇರಿ ನೂರಾರು ಜನ ಸಂಭ್ರಮ ಸಡಗರದಿಂದ ಆಚರಿಸಿದರು.
ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾ ಹಾಗೂ ಜಗದ್ಗುರು ಶಂಕರಾಚರ್ಯ ಮಹಾಸಂಸ್ತಾನಂ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದ ಪೀಠಮ್ ವತಿಯಿಂದ ಮಂಗಳ ವಾದ್ಯ ಸಹಿತ ಪಟ್ಟಣದ ಶೃಂಗೇರಿ ಶಾರದ ಮಠದಿಂದ ರಥ ಬೀದಿಗಳಲ್ಲಿ ಶಂಕರ ರಾಮಾನುಜ ಚಾರ್ಯರ ಉತ್ಸವ ಮೂರ್ತಿಗಳನ್ನು ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಗಾಯತ್ರಿ ದೇವಸ್ಥಾನದವರೆಗೂ ಮೆರವಣಿಗೆ ನಡೆಸಲಾಯ್ತು.

ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಅರ್ಚಕರ ವೇದ ಮಂತ್ರಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಶಂಕರ ರಾಮಾನುಜಾಚಾರ್ಯರ ಜಯಂತಿಯನ್ನ ಶ್ರದ್ದಾ ಭಕ್ತಿಯಿಂದ ಆಚರಿಸಲಾಯ್ತು. ಶ್ರೀ ಶಂಕರ ರಾಮಾನುಜಚಾರ್ಯರ ವೇಷಭೂಷಣಗಳನ್ನು ತೊಟ್ಟ ಮಕ್ಕಳು ಮೆರವಣಿಗೆ ಮತ್ತು ಪೂಜಾ ಕೈಂಕರ್ಯದಲ್ಲಿ ಗಮನ ಸೆಳೆದರು.ಈ ವೇಳೆ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಮಾತನಾಡಿ, ಮೆರವಣಿಗೆ ಮತ್ತು ಪೂಜಾ ಕೈಂಕರ್ಯದ ವಿಷಯಗಳ ಬಗ್ಗೆ ವಿವರಿಸಿದರು.
ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ನಂಜನಗೂಡು ತಾಲೂಕು ಅಧ್ಯಕ್ಷ ಗೋವರ್ಧನ್, ರಾಘವೇಂದ್ರ, ಬಾಲಕುಮಾರ್, ಉಮೇಶ್, ನಾಗರಾಜ್, ನಂಜನಗೂಡು ಶೃಂಗೇರಿ ಶಾರದ ಪೀಠದ ಧರ್ಮಾಧಿಕಾರಿ ರಾಮಚಂದ್ರು, ರಮೇಶ್, ಮಂಜುನಾಥ್ ಕುಲಕರ್ಣಿ, ಮುರಳಿ, ಸೇರಿದಂತೆ ಅರ್ಚಕ ವೃಂದದವರು ಹಾಗೂ ವಿಪ್ರ ಸಮುದಾಯದ ಇನ್ನಿತರರು ಉಪಸ್ಥಿತರಿದ್ದರು.

