ನಂಜನಗೂಡು: ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಂಜನಗೂಡು ಇವರು ಅಭಿವೃದ್ಧಿಪಡಿಸಲಾದ ದೇವಿರಮ್ಮನಹಳ್ಳಿ ಕೆರೆಯಿಂದ ಅಂತರ್ಜಲ ಮಟ್ಟ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ.

ಕೆರೆಯ ಅಭಿವೃದ್ಧಿಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸಂಪೂರ್ಣ ಹೂಳು ತುಂಬಿಕೊಂಡು , ಕೊಳಚೆ ನೀರಿನಿಂದ ಗಬ್ಬೆದ್ದು ನಾರುತ್ತಿದ್ದ ದೇವಿರಮ್ಮನಹಳ್ಳಿ ಕೆರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರುಜೀವ ನೀಡುವ ಮೂಲಕ ನಮ್ಮೂರು ನಮ್ಮ ಕೆರೆ ಅಭಿವೃದ್ಧಿಗೆ ಒತ್ತು ನೀಡಿದೆ.
‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಸುಮಾರು ₹12 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆರೆಯ ಹೂಳೆತ್ತುವಿಕೆ, ಬದು ನಿರ್ಮಾಣ, ಕೋಡಿ ದುರಸ್ತಿ ಹಾಗೂ ನೀರು ಶೇಖರಣೆಗೆ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.
ಈ ಮಹತ್ಕಾರ್ಯಕ್ಕೆ ದೇವಿರಮ್ಮನಹಳ್ಳಿ ಮತ್ತು ದೇವಿರಮ್ಮನಹಳ್ಳಿ ಹುಂಡಿ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಸಹಕಾರ ನೀಡಿ ಸಾಥ್ ನೀಡಿದ್ದಾರೆ. ಕೆರೆಯ ಸುತ್ತಲೂ ಬದು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಗೆ ಕಲ್ಲು ಅಳವಡಿಕೆ, ಸೋಪನಕಟ್ಟೆ ನಿರ್ಮಾಣ ಮತ್ತು ವಾಕ್ಪಾತ್ ನಿರ್ಮಾಣ, ಕೂರಲು ಆಸನದ ವ್ಯವಸ್ಥೆ ಕಲ್ಪಿಸಲು ಗ್ರಾ.ಪಂ ಆಡಳಿತ ಚಿಂತನೆ ನಡೆಸಿದೆ.

ಮಳೆ ನೀರು ಮತ್ತು ಕಾಲುವೆ ನೀರು ಹರಿದು ಬರುವಂತೆ ಕಾಮಗಾರಿ ನಡೆಸಲಾಗಿದೆ. ಇದರಿಂದ ಅಂತರ್ಜಲ ಮಟ್ಟವು ಹೆಚ್ಚಲಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಇದು ಮೂರನೇ ಕೆರೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1090 ಕೆರೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ.
- ಸಿಎಂ ಸುಗಂಧರಾಜು ಮೈಸೂರು

