ನಂಜನಗೂಡು: ಬದನವಾಳು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಸುಮಾರು 135 ಕೋಟಿ ರೂ. ವಿಶೇಷ ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ತಾಲ್ಲೂಕಿನ ವೀರೇಗೌಡನಹುಂಡಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, ಬದನವಾಳು ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಬೀದಿಯ ರಸ್ತೆ ಅಭಿವೃದ್ಧಿ ನಿರ್ಮಾಣ ಕಾಮಗಾರಿ, 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಬದನವಾಳು ಗ್ರಾಮಕ್ಕೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ಇದೆ. ಖಾದಿ ಗ್ರಾಮೋದ್ಯೋಗ ಕೇಂದ್ರ ಅಭಿವೃದ್ಧಿಗೆ ಸಚಿವ ಸಂಪುಟದಲ್ಲಿ 40 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. 93 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸಾಮಾನ್ಯ ಬೀದಿಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ 50 ಲಕ್ಷ ರೂ. ಅನುದಾನ ನೀಡಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ.
ಅಂಬೇಡ್ಕರ್ ಭವನ ನಿರ್ಮಿಸಲು ಈಗಾಗಲೇ 20 ಲಕ್ಷ ರೂ. ಅನುದಾನವನ್ನು ಮೀಸಲು ಇಡಲಾಗಿದ್ದು, ಗ್ರಾಮಸ್ಥರು ಸಭೆ ಸೇರಿ ಜಾಗವನ್ನು ಗುರುತಿಸಿ ಕೊಟ್ಟರೆ ಸುಸಜ್ಜಿತವಾದ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲಾಗುವುದು. 90 ಕೋಟಿ ರೂ. ವೆಚ್ಚದಲ್ಲಿ ದೇವನೂರು ಮತ್ತು ಬದನವಾಳು ಏತ ನೀರಾವರಿ ಯೋಜನೆಗೆ ನೀಡಲಾಗಿದೆ.
ಬದನವಾಳು ಗ್ರಾಮಕ್ಕೆ ಸುಮಾರು 135 ಕೋಟಿ ಅನುದಾನವನ್ನು ನೀಡಿ ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗೆ ನಮ್ಮ ತಾಲ್ಲೂಕಿನಲ್ಲಿ 150 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ನೀಡಿ ಕೆಲಸ ಮಾಡಲಾಗುತ್ತಿದೆ ಎಂದರು.
ಬದನವಾಳು ಗ್ರಾಮಕ್ಕೆ ವಿಶೇಷ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿರುವ ಶಾಸಕ ದರ್ಶನ್ ಧ್ರುವನಾರಾಯಣ್ ರವರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಮಾಜಿ ತಾಪಂ ಸದಸ್ಯ ರಾಮು, ಗ್ರಾ.ಪಂ ಅಧ್ಯಕ್ಷ ದೊರೆಸ್ವಾಮಿ, ಗ್ರಾಪಂ ಸದಸ್ಯರಾದ ಅವಿನಾಶ್, ಸರೋಜಮ್ಮ, ಮಹದೇವು, ವಿಜಯ್ ಕುಮಾರ್, ಮುಖಂಡರಾದ ಸೋಮು, ಸುರೇಶ್, ಪ್ರಜ್ವಲ್ ರಂಗರಾಜ್, ಉಪ್ಪನಹಳ್ಳಿ ಶಿವಣ್ಣ, ನಜೀಮ್ , ಕಲೀಲ್, ದಿಲೀಪ್, ನಾಗರಾಜ್, ಹೆಗ್ಗಡಹಳ್ಳಿ ಮಹೇಶ್, ಹುಚ್ಚೇಗೌಡ, ಹಗಿನವಾಳು ಬಸವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

