ನಂಜನಗೂಡು: ದೇವನೂರು ಶ್ರೀ ಗುರುಮಲ್ಲೇಶ್ವರ ಮಠವು ಅಕ್ಷರ, ಅನ್ನ ದಾಸೋಹದ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜೇಂದ್ರ ಹೇಳಿದರು.
ದೇವನೂರು ಗ್ರಾಮದ ಶ್ರೀ ಗುರುಮಲ್ಲೇಶ್ವರರ 127 ನೇ ಪುಣ್ಯಾರಾಧನೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದರು. ರೈತರು, ಬಡವರು ಹಾಗೂ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
“ಯಾರೇ ಎಷ್ಟೇ ಟೀಕೆ ಮಾಡಿದರೂ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಸಂಕಲ್ಪ ನಮ್ಮದಾಗಿದೆ” ಎಂದು ಹೇಳಿದರು.
ರಾಜ್ಯದ ಬಹುತೇಕ ನದಿಗಳು ಬರಿದಾಗಿದ್ದು, ರೈತರು ಮತ್ತು ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ದೇವನೂರಿನ ಪವಾಡ ಪುರುಷರಾದ ಶ್ರೀ ಗುರುಮಲ್ಲೇಶ್ವರರ ಸನ್ನಿಧಿಯಲ್ಲಿ ಉತ್ತಮ ಮಳೆ, ಸಮೃದ್ಧಿ ಬೆಳೆ ಹಾಗೂ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠ ಗೊಳಿಸಿ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದು ಇದಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಕಾಯಕ ಮತ್ತು ದಾಸೋಹ ತತ್ವಗಳನ್ನು ವೀರಶೈವ–ಲಿಂಗಾಯತ ಮಠಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮಠಗಳಿಗೆ ಆರ್ಥಿಕ ಬಲ ನೀಡುವ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು ಎಂದು ಸ್ಮರಿಸಿದರು.
ಜಗಜ್ಯೋತಿ ಬಸವಣ್ಣ ಪ್ರತಿಪಾದಿಸಿದ ತ್ರಿವಿಧ ದಾಸೋಹ ತತ್ವವನ್ನು ಶ್ರೀ ಗುರುಮಲ್ಲೇಶ್ವರ ಮಠ ಇಂದಿಗೂ ಅನುಸರಿಸುತ್ತಿದ್ದು, ಅನ್ನದಾಸೋಹ, ಅಕ್ಷರದಾಸೋಹ ಹಾಗೂ ಆಶ್ರಯ ದಾಸೋಹದ ಮೂಲಕ ಸಾವಿರಾರು ಭಕ್ತರಿಗೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮಹದೇಶ್ವರ ಬೆಟ್ಟದ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವೀರಶೈವ–ಲಿಂಗಾಯತ ಮಠಗಳು ಸಮಾಜದಲ್ಲಿ ಸಂಸ್ಕೃತಿ, ಶಿಕ್ಷಣ ಮತ್ತು ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.
ಜಗಜ್ಯೋತಿ ಬಸವಣ್ಣನವರ ಕಾಯಕ–ದಾಸೋಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಶ್ರೇಷ್ಠ ಶರಣರಲ್ಲಿ ಶ್ರೀ ಗುರುಮಲ್ಲೇಶ್ವರರು ಪ್ರಮುಖರು ಎಂದು ಬಣ್ಣಿಸಿದ ಅವರು, ಶಿಕ್ಷಣ, ಕೃಷಿ, ಸಾಹಿತ್ಯ, ಭಕ್ತಿ ಹಾಗೂ ದಾಸೋಹ ಸೇವೆಯಲ್ಲಿ ದೇವನೂರು ಶ್ರೀಮಠದ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.
ದೇವನೂರು ಮಠಾಧ್ಯಕ್ಷರಾದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಬಿ. ಹರ್ಷವರ್ಧನ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಹಾಗೂ ಡಿ.ಎಸ್. ಸದಾಶಿವಮೂರ್ತಿ ಶ್ರೀಮಠದ ಪರಂಪರೆ, ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಕಾರ್ಯಗಳ ಕುರಿತು ಮಾತನಾಡಿದರು.
ಶ್ರೀ ಗುರುಮಲ್ಲೇಶ್ವರ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಡಿ.ಎಸ್. ಗುರು, ಅಧ್ಯಕ್ಷ ರವೀಶ್ ಮೂರ್ತಿ, ಸಂಯೋಜಕ ನಿರಂಜನಮೂರ್ತಿ ಹಾಜರಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 50 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸೇವಾ ಸಮಿತಿಯ ಪದಾಧಿಕಾರಿಗಳು, ಆರಾಧನಾ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ನೆರೆದಿದ್ದರು.

