ಮೈಸೂರು: ಆಧುನಿಕ ಸಮಾಜದಲ್ಲೂ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿ ಇನ್ನೂ ಜೀವಂತವಾಗಿರುವ ಆರೋಪ ಕೇಳಿಬಂದಿದೆ. ಗ್ರಾಮದ ಅಂಗಡಿಯಲ್ಲಿ ವಸ್ತು ಖರೀದಿಸುವಂತಿಲ್ಲ, ದೇವಸ್ಥಾನಕ್ಕೆ ಪ್ರವೇಶವಿಲ್ಲ, ಕೂಲಿ ಕೆಲಸಕ್ಕೂ ಕರೆಯುವಂತಿಲ್ಲ, ಅಷ್ಟೇ ಅಲ್ಲ ಗ್ರಾಮದ ಶವಸಂಸ್ಕಾರದಲ್ಲೂ ಭಾಗವಹಿಸುವಂತಿಲ್ಲ. ಇಂತಹ ಅಮಾನವೀಯ ನಿರ್ಬಂಧಗಳಿಗೆ ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದ ಮಹದೇವಮ್ಮ ಮತ್ತು ಜವರನಾಯಕ ಕುಟುಂಬ ತುತ್ತಾಗಿದೆ.
ಮೂರು ನಾಲ್ಕು ತಲೆಮಾರುಗಳಿಂದ ಖಾಲಿ ಜಾಗದಲ್ಲಿ ಕಲ್ಲರ್ ಶೀಟ್ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಈ ಅವಿಭಕ್ತ ಕುಟುಂಬದಲ್ಲಿ 20ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಗ್ರಾಮದ ಪ್ರಭಾವಿಯೊಬ್ಬರು ಜಾಗವನ್ನು ಕಬಳಿಸಲು ಸಂಚು ರೂಪಿಸಿ, ಅದಕ್ಕೆ ಮಣಿಯದ ಕುಟುಂಬದ ವಿರುದ್ಧ ಗ್ರಾಮಸ್ಥರನ್ನು ಎತ್ತಿಕಟ್ಟಿ ಸಾಮಾಜಿಕ ಬಹಿಷ್ಕಾರ ಹಾಕಿಸಿದ್ದಾರೆ ಎಂಬುದು ಕುಟುಂಬಸ್ಥರ ಆರೋಪ.
ಯಾರಾದರೂ ಈ ಕುಟುಂಬದೊಂದಿಗೆ ವ್ಯವಹರಿಸಿದರೆ ಅಥವಾ ಸಹಾಯ ಮಾಡಿದರೆ 10 ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ. ಬಹಿಷ್ಕಾರದ ಹೆಸರಿನಲ್ಲಿ ಕುಟುಂಬಕ್ಕೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಈ ಅನ್ಯಾಯದ ವಿರುದ್ಧ ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಮಾನವ ಹಕ್ಕುಗಳ ಆಯೋಗದವರೆಗೂ ದೂರು ಸಲ್ಲಿಸಿ ನ್ಯಾಯಕ್ಕಾಗಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆದಿದೆಯೇ ಹೊರತು ನ್ಯಾಯ ಮಾತ್ರ ಸಿಕ್ಕಿಲ್ಲ ಎಂದು ಕುಟುಂಬ ನೋವು ವ್ಯಕ್ತಪಡಿಸಿದೆ.
ಇದೀಗ ಸಾಮಾಜಿಕ ಬಹಿಷ್ಕಾರದ ಕಿರುಕುಳಕ್ಕೆ ಬೇಸತ್ತು ಸಾಮೂಹಿಕ ಆತ್ಮಹತ್ಯೆಯೊಂದೇ ನಮಗಿರುವ ದಾರಿ ಎಂಬ ಆತಂಕಕಾರಿ ಮಾತುಗಳನ್ನು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಒಂದು ಕುಟುಂಬಕ್ಕೆ ಬದುಕುವ ಹಕ್ಕನ್ನೇ ನಿರಾಕರಿಸುವ ಈ ಅಮಾನವೀಯತೆಗೆ ಕೊನೆ ಯಾವಾಗ? ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ನೀಡಿ, ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕಿದೆ.

