ನಂಜನಗೂಡು: ರೈತರ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕಾದ ಪ್ರಾಥಮಿಕ ಪಶು ಚಿಕಿತ್ಸಾದ ವೈದ್ಯರು ಹಾಜರಾತಿಗೆ ಹಾಜರ್ ಕೆಲಸಕ್ಕೆ ಚಕ್ಕರ್ ಹಾಕುವ ಆರೋಪ ಕೇಳಿಬಂದಿದೆ.
ನಂಜನಗೂಡು ತಾಲ್ಲೂಕಿನ ಬ್ಯಾಳಾರು ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಗಂಭೀರ ಆರೋಪವನ್ನು ರೈತರು ಮತ್ತು ಗ್ರಾಮಸ್ಥರು ಮಾಡಿದ್ದಾರೆ.
ಪ್ರತಿದಿನ ಬೆಳಿಗ್ಗೆ ಆಸ್ಪತ್ರೆಗೆ ಆಗಮಿಸುವ ವೈದ್ಯರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಕೆಲವೇ ಸಮಯ ಇದ್ದು, ನಂತರ ತೆರಳುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಬರುವ ವೈದ್ಯರು ಅರ್ಧ ಗಂಟೆಯಷ್ಟೇ ಇದ್ದು, ನಂತರ ಆಸ್ಪತ್ರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆಸ್ಪತ್ರೆಯ ಗೋಡೆಯ ಮೇಲೆ ನಮೂದಿಸಲಾಗಿದ್ದ ಕರ್ತವ್ಯದ ವೇಳಾಪಟ್ಟಿಯನ್ನೂ ಅಳಿಸಲಾಗಿದೆ ಎನ್ನಲಾಗಿದೆ.
ಬ್ಯಾಳಾರು ಮಾತ್ರವಲ್ಲದೆ ದೇಬೂರು, ಹಂಡುವಿನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರು ತಮ್ಮ ಜಾನುವಾರುಗಳ ಚಿಕಿತ್ಸೆಗಾಗಿ ಇದೇ ಕೇಂದ್ರವನ್ನು ಅವಲಂಬಿಸಿದ್ದಾರೆ. ಆದರೆ, ವೈದ್ಯರ ಅಲಭ್ಯತೆಯಿಂದ ಅನಾರೋಗ್ಯಕ್ಕೆ ತುತ್ತಾದ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ರೈತರು ಪರದಾಡುವಂತಾಗಿದೆ.
ಇನ್ನು ಆಸ್ಪತ್ರೆಗೆ ಹೋದ ರೈತರಿಗೆ ಔಷಧಗಳಿಲ್ಲ ಎಂದು ಚೀಟಿ ಬರೆದುಕೊಟ್ಟು ಹೊರಗಿನಿಂದ ಔಷಧ ಖರೀದಿಸುವಂತೆ ಸೂಚಿಸಲಾಗುತ್ತಿದೆ. ಸರ್ಕಾರದಿಂದ ಔಷಧ ಪೂರೈಕೆಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಪಶುಸಂಗೋಪನಾ ಇಲಾಖೆಯ ಪ್ರಮುಖ ಉದ್ದೇಶವೇ ರೈತರ ಜಾನುವಾರುಗಳಿಗೆ ರೋಗನಿರ್ಣಯ, ಚಿಕಿತ್ಸೆ, ಲಸಿಕೆ ಹಾಗೂ ಅಗತ್ಯ ಪಶುವೈದ್ಯಕೀಯ ಸೇವೆಗಳನ್ನು ಒದಗಿಸುವುದಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಲಭ್ಯವಿಲ್ಲದಿದ್ದರೆ ರೈತರು ಯಾರನ್ನು ಆಶ್ರಯಿಸಬೇಕು ಎಂಬ ಪ್ರಶ್ನೆ ಎದುರಾಗಿದೆ.
ವೈದ್ಯರ ಕರ್ತವ್ಯದ ಸಮಯ, ಹಾಜರಾತಿ, ಗೈರುಹಾಜರಿಗೆ ಸಂಬಂಧಿಸಿದಂತೆ ಇಲಾಖೆಯ ನಿಯಮಾವಳಿ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಆಸ್ಪತ್ರೆಯಲ್ಲಿ ಅಗತ್ಯ ಔಷಧಗಳ ನಿರಂತರ ಪೂರೈಕೆಗೂ ವ್ಯವಸ್ಥೆ ಮಾಡಬೇಕಿದೆ.
ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಬ್ಯಾಳಾರು ಪಶು ಚಿಕಿತ್ಸಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ರೈತರಿಗೆ ನಿರಂತರ ಪಶುವೈದ್ಯಕೀಯ ಸೇವೆ ದೊರೆಯುವಂತೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಬ್ಯಾಳಾರು ಆನಂದ್ ಒತ್ತಾಯಿಸಿದ್ದಾರೆ.
ರೈತರ ಜೀವನಾಧಾರವಾಗಿರುವ ಜಾನುವಾರುಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

