ನಂಜನಗೂಡು: ಮುಜರಾಯಿ ಇಲಾಖೆಯ ದಿವ್ಯಾ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಐತಿಹಾಸಿಕ ತಗಡೂರು ಶ್ರೀ ಅಂಕನಾಥೇಶ್ವರ ದೇವಾಲಯ ಶತಮಾನಗಳಿಂದಲೂ ಅಭಿವೃದ್ಧಿಯಿಂದ ವಂಚಿತವಾಗಿದೆ.
ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿರುವ ಶ್ರೀ ಅಂಕನಾಥೇಶ್ವರ ದೇವಾಲಯವು ಕ್ರಿ.ಶ 997 ರಲ್ಲಿ ರಾಜ ರಾಜೇಂದ್ರ ಚೋಳನ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸವು ಹೇಳುತ್ತದೆ. ಅಲ್ಲದೆ ಅಂಕನಾಥೇಶ್ವರ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಪುರಾತನ ಕಾಲದ ದೇವಾಲಯವು ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿದೆ.
ದೇವಸ್ಥಾನದಲ್ಲಿ ಶ್ರೀ ಅಂಕನಾಥೇಶ್ವರ, ತಗಡೂರಯ್ಯ, ನವಗ್ರಹ, ಗಣಪತಿ, ನಾಗರಕಲ್ಲು, ಕಾಲಭೈರವ, ದಕ್ಷಿಣ ಮೂರ್ತಿ, ನಾರಾಯಣಸ್ವಾಮಿ, ಚೆನ್ನಮಲ್ಲಿಕಾರ್ಜುನ, ನಟರಾಜಮೂರ್ತಿ, ನಂದಿ, ಚಂಡಿಕೇಶ್ವರಿ ದೇವರುಗಳನ್ನು ಒಳಗೊಂಡಿದೆ. ದೇವಾಲಯದ ಹೊರಹಾವರಣದಲ್ಲಿ ಮೂರು ಕಲ್ಯಾಣಿ ಕೊಳಗಳು ಇವೆ. ದೇವಾಲಯದಲ್ಲಿ ಪ್ರತಿದಿನ ಶ್ರೀ ಅಂಕನಾಥೇಶ್ವರ ಸ್ವಾಮಿಗೆ ಅಭಿಷೇಕ, ತಳಿಗೆ ಪೂಜೆ, ಪಂಚಾಮೃತ ಅಭಿಷೇಕ, ರುದ್ರ ಅಭಿಷೇಕ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಸುಮಾರು 20 ಪೂಜಾರಿಗಳು ಸರದಿ ಸಾಲಿನಂತೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
ಅಲ್ಲದೆ ಪ್ರತಿ ಭಾನುವಾರ ಮತ್ತು ಅಮಾವಾಸ್ಯೆ, ಹುಣ್ಣಿಮೆ, ವಿಶೇಷ ದಿನಗಳು ಮತ್ತು ಹಬ್ಬಗಳ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಗೌರಿ ಗಣೇಶ ಹಬ್ಬದ ಮಾರನೇ ದಿನ ಪ್ರತಿ ವರ್ಷವೂ ಶ್ರೀ ಅಂಕನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುತ್ತದೆ. ದೇವಾಲಯಕ್ಕೆ ತಮಿಳುನಾಡು, ಬೆಂಗಳೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೊಡಗು, ಚಾಮರಾಜನಗರ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಭಕ್ತರು ತಮ್ಮ ಹರಕೆಗಳನ್ನು ತೀರಿಸಿ, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ದೇವಾಲಯಕ್ಕೆ ಪ್ರತಿ ತಿಂಗಳು ಅಂದಾಜು ಒಂದು ಲಕ್ಷ ರೂ. ಕಾಣಿಕೆ ಬರುತ್ತದೆ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ಹಣವು ಕಾಣಿಕೆಯಾಗಿ ಬಂದರೂ ದೇವಾಲಯ ಮಾತ್ರ ಅಭಿವೃದ್ಧಿ ಕಂಡಿಲ್ಲ.
ದೇವಾಲಯದಲ್ಲಿ ಯಾವುದೇ ಭದ್ರತೆ ಇಲ್ಲ. ಆಗಮಿಸುವ ಭಕ್ತರಿಗೆ ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸ್ನಾನ ಗೃಹಗಳಂತು ಇಲ್ಲವೇ ಇಲ್ಲ. ಮುಡಿಕಟ್ಟೆಯೂ ಹಾವು ಚೇಳುಗಳ ವಾಸಸ್ಥಾನವಾಗಿದೆ. ದೇವಾಲಯದ ಕಾಂಪೌಂಡ್ ಗೋಡೆ ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿವೆ. ಈಗಾಗಲೇ ಗೋಪುರ ನಿರ್ಮಾಣ ಮಾಡಲು 80 ಲಕ್ಷ ರೂ. ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಕಾಮಗಾರಿಗೆ ಅನುದಾನದ ಕೊರತೆ ಇರುವುದರಿಂದ ದೇವಾಲಯದ ಅಭಿವೃದ್ಧಿ ಕುಂಠಿತಗೊಂಡಿದೆ. ಮುಜರಾಯಿ ಇಲಾಖೆಯ ಅಧಿಕಾರಿಗಳಂತೂ ಈ ಕಡೆ ತಿರುಗಿಯೂ ನೋಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ಇತ್ತ ಗಮನಹರಿಸಿ ದೇವಾಲಯವನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರ ತಾಣವನ್ನಾಗಿ ಅಭಿವೃದ್ಧಿ ಪಡಿಸುವವರೇ ಕಾದು ನೋಡಬೇಕಿದೆ.
ಹಾವು ಚೇಳುಗಳ ವಾಸಸ್ಥಾನವಾದ ಮುಡಿಕಟ್ಟೆ..!
ದೇವಾಲಯಕ್ಕೆ ಬರುವ ಭಕ್ತರು, ತಮ್ಮ ಹರಕೆಗಳನ್ನು ತೀರಿಸಲು ಮುಡಿಯನ್ನು ತೆಗೆಸುತ್ತಾರೆ. ಮುಡಿಕಟ್ಟೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಹಾವು ಚೇಳುಗಳ ವಾಸಸ್ಥಾನವಾಗಿದೆ. ಮುಡಿ ತೆಗೆದುಕೊಂಡು ಕಲ್ಯಾಣಿಯಲ್ಲಿ ಸ್ನಾನ ಮಾಡುತ್ತಿದ್ದು ಭಕ್ತರು, ಇದೀಗ ಕಲ್ಯಾಣಿಯಲ್ಲಿ ನೀರಿಲ್ಲದೆ ಬಣಗುಡುತ್ತಿದೆ. ಅಲ್ಲದೆ ಸ್ನಾನ ಮಾಡಲು ಸ್ನಾನಗೃಹಗಳಿಲ್ಲದೆ ಭಕ್ತರು ಪರದಾಡುವಂತಾಗಿದೆ.
ದೇವಾಲಯದಲ್ಲಿ ಹುಂಡಿ ಕಳ್ಳತನ ಪ್ರಕರಣ
ದೇವಾಲಯವು ಗ್ರಾಮದ ಹೊರವಲಯದಲ್ಲಿರುವುದರಿಂದ ಕಳ್ಳರಿಗೆ ಅನುಕೂಲವಾಗಿದೆ. ಮುಜರಾಯಿ ಇಲಾಖೆ ಅಳವಡಿಸಿದ್ದ ಹುಂಡಿಯನ್ನು ಹೊಡೆದು ಕಳ್ಳತನ ಮಾಡಿದ ಪ್ರಕರಣಗಳು ಸಾಕಷ್ಟು ನಡೆದಿವೆ. ದೇವಾಲಯದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಲ್ಲ. ಕಾಂಪೌಂಡ್ ವ್ಯವಸ್ಥೆ ಇಲ್ಲ, ಯಾವುದೇ ಭದ್ರತೆ ಇಲ್ಲದಿರುವುದೇ ಕಳ್ಳತನಕ್ಕೆ ಪ್ರಮುಖ ಕಾರಣವಾಗಿದ್ದು, ಅಭಿವೃದ್ಧಿಯಾಗದಿರುವುದಕ್ಕೆ ಕಳ್ಳತನವು ಪ್ರಮುಖ ಕಾರಣವಾಗಿದೆ ಎಂದು ಭಕ್ತರು ಹೇಳುತ್ತಾರೆ.

