ನಂಜನಗೂಡು: ತಾಲ್ಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ಕಬಿನಿ ಬಲದಂಡೆ ನಾಲೆಯಲ್ಲಿ ಈಜಲು ಹೋಗಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಬಸವ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಪುತ್ರಿ ಸುಮಿತ್ರಾ ಮೃತ ವಿದ್ಯಾರ್ಥಿನಿ. ಈಕೆ ನಂಜನಗೂಡಿನ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ದೊಡ್ಡಮ್ಮನ ಮನೆಯಾದ ಕೊಡಿ ನರಸೀಪುರ ಗ್ರಾಮಕ್ಕೆ ಬಂದಿದ್ದ ಸುಮಿತ್ರಾ, ಐವರು ಸ್ನೇಹಿತರೊಂದಿಗೆ ಈಜಲು ನಾಲೆಗೆ ತೆರಳಿದ್ದಳು. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಮತ್ತೊಬ್ಬ ಗೆಳತಿ ಭವಾನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಮತ್ತು ಬುದ್ಧ ಪ್ರಜ್ಞೆ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಗುರುತಿಸಿಕೊಂಡಿದ್ದ ಸುಮಿತ್ರಾಳ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಪರಿಚಿತರಿಗೆ ಆಘಾತ ತಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.