ನಂಜನಗೂಡು: ಮನುಷ್ಯನ ಜೀವನದಲ್ಲಿ ಉತ್ತಮ ನಡೆ-ನುಡಿ ಹಾಗೂ ಸದ್ಗುಣಗಳು ಅತ್ಯಂತ ಮುಖ್ಯವಾಗಿದ್ದು, ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವ ಸಂಕಲ್ಪ ಮಾಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಯೋಗೀಶ್ ಕರೆ ನೀಡಿದರು.

ನಂಜನಗೂಡು ನಗರದ ತಾಲೂಕು ಕಾರಾಗೃಹದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ವಿವಿಧ ವರ್ಗಗಳ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಾವಿರಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. 84 ಸಾವಿರ ಜೀವರಾಶಿಗಳಲ್ಲಿ ಅತ್ಯಂತ ಬುದ್ಧಿವಂತ ಜೀವಿ ಮಾನವ. ಇಂತಹ ಅಮೂಲ್ಯವಾದ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮ ನಡೆ, ನುಡಿ ಹಾಗೂ ಆಲೋಚನೆಗಳು ಉತ್ತಮವಾಗಿದ್ದರೆ ಮಾತ್ರ ಸಮಾಜದಲ್ಲಿ ಗೌರವಯುತ ವ್ಯಕ್ತಿಗಳಾಗಿ ಬದುಕಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಸನ್ನಡತೆಯ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು.

ನಂತರ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ಪೂಜ್ಯರು ಸಮಾಜದ ಸುಧಾರಣೆಗಾಗಿ ಅನೇಕ ಜನಪರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮನುಷ್ಯನ ಜೀವನದಲ್ಲಿ ನಡೆಯುವ ಹಲವು ತಪ್ಪುಗಳಿಗೆ ದುಶ್ಚಟಗಳೇ ಪ್ರಮುಖ ಕಾರಣವಾಗುತ್ತವೆ. ಮದ್ಯಪಾನ ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗುವುದರಿಂದ ವ್ಯಕ್ತಿಯ ಜೀವನ ಮಾತ್ರವಲ್ಲದೆ ಕುಟುಂಬದ ನೆಮ್ಮದಿಯೂ ಹಾಳಾಗುತ್ತದೆ. ದುಶ್ಚಟಗಳನ್ನು ತ್ಯಜಿಸಿ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಂಡರೆ ಜೀವನ ಸುಂದರವಾಗಿರುತ್ತದೆ ಎಂದು ಹೇಳಿದರು.

ಪೂಜ್ಯರು ಸಮಾಜದಲ್ಲಿ ರಾಮರಾಜ್ಯದ ಕನಸು ಕಂಡಿದ್ದು, ಅದನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಪ್ಪುಗಳಿಂದ ಪಾಠ ಕಲಿತು, ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕಾರಾಗೃಹದಲ್ಲಿರುವ ಬಂಧಿಗಳು ಕೂಡ ತಮ್ಮ ಜೀವನದಲ್ಲಿ ಹೊಸ ಬದಲಾವಣೆ ತಂದುಕೊಂಡು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಕಾರಾಗೃಹ ನಿರೀಕ್ಷಕಿ ಸುರೇಖಾ, ಯೋಜನಾಧಿಕಾರಿ ಕೆ.ಧರ್ಮರಾಜ್, ಮೇಲ್ವಿಚಾರಕ ಚಂದನ್, ಕಾರಾಗೃಹದ ಸಿಬ್ಬಂದಿಗಳು ಹಾಗೂ ಬಂಧೀಖಾನೆಯಲ್ಲಿರುವ ಬಂಧಿಗಳು ಹಾಜರಿದ್ದರು.