ಮೈಸೂರು: ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಕೆ.ಕೌಶಿಕ್ ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ.
ವಿಜಯನಗರ-ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ರೌಡಿ ಶೀಟರ್ ಕೆ. ಕೌಶಿಕ್ ನನ್ನು ವಿಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಎಂ ಆರ್ ಲವ, ಎಸಿಪಿ ರವಿಪ್ರಸಾದ್, ಡಿಸಿಪಿ ಡಾ. ಹರ್ಷ ಪ್ರಿಯಾಂವದ ಶಿಫಾರಸ್ಸಿನ ಆಧಾರದಲ್ಲಿ ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಆದೇಶದ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಬಂಧಿತ ರೌಡಿ ಶೀಟರ್ ಕೆ. ಕೌಶಿಕ್ ನನ್ನು ಗುಲ್ಬರ್ಗ ಕೇಂದ್ರ ಕರಾಗೃಹಕ್ಕೆ ಒಪ್ಪಿಸಲಾಗಿದೆ.
ಈತನ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಬೆದರಿಕೆ, ಕೊಲೆ ಯತ್ನ, ಸೇರಿದಂತೆ ಒಟ್ಟು 5 ಪ್ರಕರಣ, ಇಲಾವಾಲ ವ್ಯಾಪ್ತಿಯಲ್ಲಿ ದೊಂಬಿ ಪ್ರಕರಣ ಚನ್ನಪಟ್ಟಣ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ಪ್ರಕರಣಗಳು ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿದೆ.
ಈತನಿಗೆ ಮುಂಜಾಗ್ರತಾ ಬಾಂಡ್ ಪಡೆದು, ರೌಡಿ ಪರೇಡ್ ನಲ್ಲಿ ಎಚ್ಚರಿಕೆ ನೀಡಿ ನಿರಂತರ ನಿಗಾ ಇರಿಸಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದ್ದರೂ ಸಹ ತನ್ನ ವರ್ತನೆ ಯನ್ನು ತಿದ್ದಿಕೊಳ್ಳದ ಕೌಶಿಕ್ ಹಿನಕಲ್ -ಬೆಳವಾಡಿ -ಕೂರ್ಗಳ್ಳಿ ಭಾಗದಲ್ಲಿ ತನ್ನ ಉಪಟಳ ಹೆಚ್ಚಿಸಿದ ಕಾರಣ ಈತನ ವಿರುದ್ಧ ಗೂಂಡಾ ಕಾಯ್ದೆ ಬಳಸಿ ಬಂಧಿಸಲಾಗಿದೆ. ಇದೇ ರೀತಿ ತಮ್ಮ ವರ್ತನೆ ಸುಧಾರಿಸಿಕೊಳ್ಳದ ರೌಡಿ ಗಳ ಮೇಲೆ ಕಠಿಣ ಕ್ರಮ ಜರುಗಿಸುವ ಸಂದೇಶ ಮೈಸೂರು ಪೊಲೀಸರು ರವಾನಿಸಿದ್ದಾರೆ.

