ನಂಜನಗೂಡು: ಮೂರು ದಶಕಗಳ ಕಾಲ ಖಾಕಿ ತೊಟ್ಟು ಜನಸೇವೆ ಮಾಡಿದ್ದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ಗೋಪಾಲಕೃಷ್ಣ ಅವರು ಇತ್ತೀಚೆಗೆ ನಿವೃತ್ತರಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ‘ಕೈ’ ಹಿಡಿದಿದ್ದಾರೆ.

ನಂಜನಗೂಡು ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ಸಮ್ಮುಖದಲ್ಲಿ ಕೆ.ಗೋಪಾಲಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಶಾಸಕರು ಪಕ್ಷದ ಶಾಲು ಹೊದಿಸಿ, ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಕೆ.ಗೋಪಾಲಕೃಷ್ಣ ಅವರು ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಅವರ ಅನುಭವ, ಜನಸಂಪರ್ಕ ಪಕ್ಷಕ್ಕೆ ದೊಡ್ಡ ಶಕ್ತಿ. ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದಂತೆ, ಇನ್ನು ಮುಂದೆ ಪಕ್ಷದ ಮೂಲಕ ಸಮಾಜ ಸೇವೆ ಮಾಡಲಿ ಎಂದು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪಿಎಸ್‌ಐ ಕೆ.ಗೋಪಾಲಕೃಷ್ಣ, ಪೊಲೀಸ್ ಇಲಾಖೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ಜನರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇನೆ. ನಿವೃತ್ತಿಯ ನಂತರವೂ ಜನಸೇವೆಯನ್ನು ಮುಂದುವರಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಕಾಂಗ್ರೆಸ್‌ನ ಸಿದ್ಧಾಂತ, ಬಡವರ ಪರ ಕಾಳಜಿ ನನ್ನನ್ನು ಆಕರ್ಷಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಮಾಜಿ ಜಿಪಂ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ಮಾಜಿ ತಾ.ಪಂ ಅಧ್ಯಕ್ಷ ನಾಗೇಶ್ ರಾಜ್, ಎಸ್ಸಿ ಬ್ಲಾಕ್ ಘಟಕದ ಅಧ್ಯಕ್ಷ ಹಲ್ಲರೆ, ನಗರ ಬ್ಲಾಕ್ ಅಧ್ಯಕ್ಷ ಸಿಎಂ ಶಂಕರ್, ಕೆಪಿಸಿಸಿ ಎಸ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಗೌಡ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್,ದೇವರಸನಹಳ್ಳಿ ರಘು, ದೇಬೂರು ಅಶೋಕ್, ಉಪ್ಪನಹಳ್ಳಿ ಶಿವಣ್ಣ, ರಾಜೇಶ್, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.