ನಂಜನಗೂಡು: ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಚಲನಚಿತ್ರ ನಟ ದಿವಂಗತ ಕೆ.ಶಿವರಾಂ ರವರ 72ನೇ ವರ್ಷದ ಹುಟ್ಟು ಹಬ್ಬವನ್ನು ನಂಜನಗೂಡಿನಲ್ಲಿ ಮೈಸೂರು ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ ಆಚರಣೆ ಮಾಡಲಾಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ಮುಂಭಾಗದಲ್ಲಿ ಕೆ.ಶಿವರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಬಳಿಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಅಂಬೇಡ್ಕರ್ ಅವರ ಗುರಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಈ ಹಾಡಿನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಶಿವರಾಂ ರವರ ಅಧಿಕಾರದ ಅವಧಿಯಲ್ಲಿ ಶೋಷಿತ ಸಮುದಾಯದ ಪರ ಸಾಕಷ್ಟು ಕೆಲಸ ಮಾಡಿದ್ದಾರೆ.
ಇದರಿಂದ ಶೋಷಿತ ಸಮುದಾಯದ ಕುಟುಂಬಗಳು ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದಾರೆ. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಭಾವನಾತ್ಮಕವಾಗಿ ನಮ್ಮ ಜೊತೆ ಇದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ದಲಿತ ಸಮುದಾಯ ವಂಚಿತವಾಗಿತ್ತು. ಅದನ್ನು ಮನಗಂಡು ತಾವೇ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿ ತಮ್ಮದೆ ಆದ ಛಾಪು ಮೂಡಿಸಿದರು. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿದರು.
ಯುವತಿಯರನ್ನು ಗಗನಸಖಿಯಾಗಿ ಮಾಡಬೇಕು ಎಂದು ಯುವತಿಯರಿಗೆ ವಿಶೇಷ ತರಬೇತಿಗಳನ್ನು ನೀಡುತ್ತಿದ್ದರು. ಸಮುದಾಯ ಹಿತದೃಷ್ಟಿಯಿಂದ ಸಂಘಟನೆ ಮಾಡಬೇಕು ಎಂಬ ಉದ್ದೇಶದಿಂದ ಛಲವಾದಿ ಮಹಾಸಭಾ ಸಂಘಟನೆ ಹುಟ್ಟು ಹಾಕಿ ರಾಜ್ಯಾದ್ಯಂತ ಸಂಚರಿಸಿದರು. ಹೀಗೆ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಅಭಿನಾಗಭೂಷಣ್ ಮಾತನಾಡಿ, ಕೆ.ಶಿವರಾಂ ರವರು ಬಡವರ ಪರವಾಗಿ ನಿಂತ ವ್ಯಕ್ತಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಪ್ರಪ್ರಥಮವಾಗಿ ಐಎಎಸ್ ಪಾಸ್ ಮಾಡಿ ರಾಜ್ಯಕ್ಕೆ ಮಾದರಿಯಾದರು. ಶೇ. 18ರಷ್ಟು ಮೀಸಲು ಹಣವನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಸದ್ಬಳಕೆ ಮಾಡಿಕೊಂಡು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರು. ಐಎಎಸ್ ಅಧಿಕಾರಿ ಆದ ಸಂದರ್ಭದಲ್ಲಿ ದಾವಣಗೆರೆ ಹಾಗೂ ಮೈಸೂರಿನಲ್ಲಿ ಬಡವರಿಗೆ ವಾಸಿಸುವ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಅನೇಕ ನಿರುದ್ಯೋಗಿ ಯುವಕ ಯುವತಿಯರಿಗೆ ಜೀವನ ಉಪಯೋಗಕ್ಕಾಗಿ ವಾಹನ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರಿಗೆ ಅವಕಾಶಗಳು ಸಿಗಲಿಲ್ಲ. ಅವರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು ಹಾಗಾಗಿ ಛಲವಾದಿ ಮಹಾಸಭಾ ವತಿಯಿಂದ ಗ್ರಾಮೀಣ ಪ್ರದೇಶ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಶೈಕ್ಷಣಿಕವಾಗಿ ಬೇಕಾಗುವ ಸಾಮಗ್ರಿಗಳು ಮತ್ತು ವಿಶೇಷ ತರಬೇತಿಗಳನ್ನು ನೀಡುತ್ತಿದ್ದೇವೆ. ಕೆ.ಶಿವರಾಂ ರವರ ಹೆಸರಿನಲ್ಲಿ ನಾವು ಸಾಕಷ್ಟು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅವರು ದೈಹಿಕವಾಗಿ ನಮ್ಮೊಟ್ಟಿಗೆ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮ ಮನಸ್ಸಿನಲ್ಲಿ ನೆಲೆಸಿದ್ದಾರೆ ಎಂದು ನೆನೆದು ಭಾವುಕರಾದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಅಭಿನಾಗಭೂಷಣ್, ತಾಲ್ಲೂಕು ಅಧ್ಯಕ್ಷ ಉಮೇಶ್ ರಾಜ್, ಪಟ್ಟಣ ಅಧ್ಯಕ್ಷ ರಾಜೇಂದ್ರ, ದಸಂಸ ತಾಲ್ಲೂಕು ಸಂಚಾಲಕರಾದ ಶಂಕರಪುರ ಸುರೇಶ್, ಗಟ್ಟವಾಡಿ ಮಹೇಶ್, ಛಲವಾದಿ ಮಹಾಸಭಾದ ಸದಸ್ಯರಾದ ಜ್ಯೋತಿ ಲಿಂಗರಾಜು, ಜಯರಾಮ್, ಸುರೇಶ್, ಚಂದು, ರಾಜಣ್ಣ, ಮಧುಸೂದನ್, ಲೋಹಿತ್ ಕುಮಾರ್, ಬಾಬು, ಯುವ ಮುಖಂಡ ಎಂ.ಡಿ ಬಾಲರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

