ನಂಜನಗೂಡು: ರೈತರ ಜಮೀನುಗಳಲ್ಲಿರುವ ಪಂಪ್‌ಸೆಟ್‌ಗಳ ಕೇಬಲ್ ವೈರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ರೈತರ ಕೈಗೆ ಸಿಕ್ಕಿಬಿದ್ದ ಘಟನೆ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಶಾಂತಿನಗರದ ಶಾಹಿದ್ ಮತ್ತು ಮಹಮ್ಮದ್ ರೋಷನ್ ಎಂಬ ಯುವಕರು ಕೇಬಲ್ ಕಳ್ಳತನ ಮಾಡುವಾಗ ರೈತರಿಗೆ ಸಿಕ್ಕಿಬಿದ್ದ ಆರೋಪಿಗಳು. ನಂಜನಗೂಡು ತಾಲ್ಲೂಕಿನ ತಾಯೂರು, ಸಾಲುಂಡಿ, ವಡ್ಡರಹುಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಪಂಪ್‌ಸೆಟ್‌ಗಳ ಕೇಬಲ್ ವೈರ್ ಕಳ್ಳತನವಾಗುತ್ತಿದ್ದ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದರು.

ಇಂದು ಬೆಳಗಿನ ಜಾವ ತಾಯೂರು ಗ್ರಾಮದ ರೈತರಾದ ವರದರಾಜು, ಬಸವಣ್ಣ, ಗಿರೀಶ, ರಘು ಹಾಗೂ ಸಾಲುಂಡಿ ಗ್ರಾಮದ ಮಂಜು ಮತ್ತು ಮಹದೇವ ಅವರ ಜಮೀನುಗಳಲ್ಲಿ ಸ್ಕೂಟಿಯಲ್ಲಿ ಬಂದ ಯುವಕರು ಕೇಬಲ್ ಕಳ್ಳತನ ಮಾಡುತ್ತಿದ್ದಾಗ ಅಕ್ಕಪಕ್ಕದ ರೈತರು ಪರಸ್ಪರ ಮಾಹಿತಿ ಹಂಚಿಕೊಂಡು ಸ್ಥಳದಲ್ಲಿ ಜಮಾಯಿಸಿದ್ದಾರೆ.

ರೈತರು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಕದ್ದ ಕೇಬಲ್ ವೈರ್‌ಗಳನ್ನು ಸ್ಥಳದಲ್ಲೇ ಬಿಟ್ಟು ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದಾರೆ. ಬಳಿಕ ರೈತರು ಕಬ್ಬಿನ ಗದ್ದೆಯಲ್ಲಿ ಹುಡುಕಾಟ ನಡೆಸಿ ಇಬ್ಬರನ್ನೂ ಹೊರಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ನಂತರ ಕಳ್ಳತನದ ಕುರಿತು ಬಿಳಿಗೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕಳ್ಳತನಕ್ಕೆ ಬಳಸಿದ್ದ ಕೆಎ-55 ಇಬಿ-2539 ನೋಂದಣಿ ಸಂಖ್ಯೆಯ ಸ್ಕೂಟರ್ ಹಾಗೂ ಕದ್ದ ಕೇಬಲ್ ವೈರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಿಳಿಗೆರೆ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.