ನಂಜನಗೂಡು: ಕರ್ನಾಟಕ ರಾಜ್ಯ ದಸ್ತಾವೇಜು ಬರಹಗಾರರ ಒಕ್ಕೂಟದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ನಂಜನಗೂಡಿನಲ್ಲಿ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಜಮಾಮನೆಗೊಂಡ ಬರಹಗಾರರ ಸಂಘದ ಸದಸ್ಯರು ಸರ್ಕಾರದ ನೂತನ ನಿಯಮವನ್ನು ಖಂಡಿಸಿದರು. ಬಳಿಕ ಸಂಘದ ಅಧ್ಯಕ್ಷ ಪ್ರಕಾಶ್ ರಾಜೇ ಅರಸ್ ಮಾತನಾಡಿ, ಕಾವೇರಿ 01 ತಂತ್ರಾಂಶದ ಮುಖಾಂತರ ಸರ್ಕಾರ ಕಂಪ್ಯೂಟರಿಕರಣವನ್ನು ಜಾರಿಗೆ ತಂದು ಉಂಟಾಗುತ್ತಿದ್ದ ಸಮಯದ ವಿಳಂಬವನ್ನು ತಪ್ಪಿಸುವಲ್ಲಿ ನೋಂದಣಿ ಮಾಡುತ್ತಿರುವುದು ಸ್ವಾಗತಾರ್ಹ ವಿಷಯ.

ಈ ಸಂದರ್ಭದಲ್ಲಿ ಪತ್ರ ಬರಹಗಾರರು ನೋಂದಣಿಗೆ ಪತ್ರಗಳನ್ನು ತಯಾರಿಸಿ ಪಕ್ಷಕಾರದಿಂದ ರುಜು ಮಾಡಿಸಿ ನೋಂದಣಿಗೆ ಹಾಜರುಪಡಿಸಿ ಫೋಟೋ, ಹೆಬ್ಬೆಟ್ಟು ಆಯಾ ದಿವಸವೇ ಪಕ್ಷಕಾರರಿಗೆ ಹಿಂದಿರುಗಿಸುತ್ತಿದ್ದರು. ಆದ್ದರಿಂದ ಪತ್ರ ಬರಹಗಾರರಿಗೆ ಯಾವುದೇ ರೀತಿಯ ತೊಂದರೆ ಆಗಿರಲಿಲ್ಲ. ಆನಂತರ ಇಲಾಖೆ ಕಾವೇರಿ 2 ತಂತ್ರಾಂಶ ಜಾರಿಗೆ ತಂದು ಸಂಬಂಧಪಟ್ಟ ಪತ್ರಗಳನ್ನು ಅವರುಗಳೇ  ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸಿಟಿಜನ್ ಲಾಗಿನ್ ಎಂಬ ತಂತ್ರಜ್ಞಾನವನ್ನು ಜಾರಿಗೆ ತಂದಿದ್ದಾರೆ.

ಆದರೆ, ಈ ತಂತ್ರಾಂಶವನ್ನು ಸಾರ್ವಜನಿಕರು ಉಪಯೋಗಿಸದೆ ಡಿಟಿಪಿ ಸೆಂಟರ್, ಸೈಬರ್ ಸೆಂಟರ್ ಮತ್ತು ಕಂಪ್ಯೂಟರ್ ಸೆಂಟರ್ ಗಳು ಉಪಯೋಗ ಮಾಡಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದ ಪರವಾನಗಿ ಪಡೆದ ಪತ್ರ ಬರಹಗಾರರ ಕೆಲಸಕ್ಕೆ ಸಮಸ್ಯೆ ಉಂಟಾಗಿದೆ. ಸರ್ಕಾರ ತಂದಿರುವ ಫೇಸ್ ಲೆಸ್ ಮತ್ತು ಪೇಪರ್ ಲೆಸ್ ತಂತ್ರಾಂಶದಿಂದ ಬರಹಗಾರರ ವೃತ್ತಿ ಇರುವುದಿಲ್ಲ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪತ್ರ ಬರಹಗಾರರು ರಾಜ್ಯಾದ್ಯಂತ 16 ಸಾವಿರ ಜನರು ಇದ್ದು, ಇವರ ಜೊತೆಗೆ ಸಹಾಯಕರ ಮತ್ತು ಕಂಪ್ಯೂಟರ್ ಆಪರೇಟರ್ಗಳು ಸೇರಿ ಒಂದು ಲಕ್ಷ ಜನ ಇದ್ದು, ಇವರ ಕುಟುಂಬಗಳು ಸೇರಿ 5,00,000 ಜನ ಬೀದಿ ಪಾಲಾಗುತ್ತಿರುವ ಹಿನ್ನೆಲೆ ನೊಂದಣಿ ಮತ್ತು ಮುದ್ರಾಂಕ ಇಲಾಖೆಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿದರು ಸ್ಪಂದಿಸಿರುವುದಿಲ್ಲ. ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್, ಪತ್ರ ಬರಹಗಾರರ ಸಹಿ, ಅಧಿಕೃತ ಗುರುತಿನ ಚೀಟಿ ನೀಡುವಂತೆ ಆಗ್ರಹಿಸಿದರು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಎಸ್.ಗುರುರಾಜು, ಉಪಾಧ್ಯಕ್ಷ ಎಚ್ಎಸ್ ಬಸವರಾಜು, ಕಾರ್ಯದರ್ಶಿ ಕುಮಾರಸ್ವಾಮಿ, ಕೃಷ್ಣಪ್ಪ ಗೌಡ, ಬದನವಾಳು ಮಹದೇವಪ್ಪ, ಚೆನ್ನ ಮಲ್ಲಪ್ಪ, ಶಶಿಧರ, ನಾಗರಾಜು ಅರಸ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.