ನಂಜನಗೂಡು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ವ್ಯವಸ್ಥಿತ ಸಮಸ್ಯೆಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಂ ವಾಂಗ್ಲುಕ್ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಂಜನಗೂಡು ತಾಲ್ಲೂಕು ಘಟಕದ ವತಿಯಿಂದ ಸೋಮವಾರ ತಾಲ್ಲೂಕು ಆಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ದಸಂಸ ತಾಲ್ಲೂಕು ಸಂಚಾಲಕ ಶಂಕರಪುರ ಸುರೇಶ್, ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ವ್ಯವಸ್ಥಿತ ಸಮಸ್ಯೆಗಳ ವಿರುದ್ಧ ಸೋನಂ ವಾಂಗ್ಲುಕ್ ಅವರು ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರೊಂದಿಗೆ ದೇಶದಾದ್ಯಂತ ವಿದ್ಯಾರ್ಥಿಗಳು ಕೂಡ 20 ದಿನಗಳಿಂದ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಆದರೆ ಅತ್ಯಂತ ಗಂಭೀರವಾದ ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಯಾವುದೇ ಸ್ಪಂದನೆ ನೀಡದೆ ಮೌನವಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಆಗಿದೆ. ಇದು ತೀವ್ರ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಭವಿಷ್ಯದ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಬಾರದು ಎಂದು ಒತ್ತಾಯಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರ, ಪೇಪರ್ ಲೀಕ್ ಮಾಫಿಯಾ, ಶುಲ್ಕದ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ದೇಶದ ಕೋಟ್ಯಂತರ ವಿದ್ಯಾರ್ಥಿ-ಯುವಜನರ ಭವಿಷ್ಯದ ಹಿತದೃಷ್ಟಿಯಿಂದ ಗೌರವಾನ್ವಿತ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಕೇಂದ್ರ ಸರ್ಕಾರವು ತಕ್ಷಣವೇ ಪ್ರತಿಭಟನಾ ನಿರತರೊಂದಿಗೆ ಸಂವಾದ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ನೀಟ್ ಪೇಪರ್ ಲೀಕ್ ಬಗ್ಗೆ ಸಮಗ್ರ ತನಿಖೆ ಮತ್ತು ಕಠಿಣ ಕಾನೂನು ಜಾರಿ ಮಾಡಬೇಕು. ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ತಜ್ಞರ ಸಮಿತಿ ರಚಿಸಬೇಕು. ಸೋನಂ ವಾಂಗ್ಲುಕ್ ಮತ್ತು ಪ್ರತಿಭಟನಾ ನಿರತರೊಂದಿಗೆ ತಕ್ಷಣ ಚರ್ಚೆ ಮಾಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಚಿಕ್ಕಣ್ಣ ಹಗಿನವಾಳು, ಮರಿಸ್ವಾಮಿ ಹೊಸೂರು, ಯಶ್ವಂತ್‌ಕುಮಾರ್ ಶ್ರೀರಾಂಪುರ, ಸುಧನ್ ಕೂಗಲೂರು, ನವೀನ್ ಆನಂದಪುರ, ರವಿ ಕುರಿಹುಂಡಿ, ನಟರಾಜು ರಾಜೂರು, ಅನಿಲ್ ಕುಮಾರ್ ಆನಂದಪುರ, ಡಿ.ಸಿ ಶಿವಕುಮಾರ್, ನಾರಾಯಣ ಉಪ್ಪನಹಳ್ಳಿ, ಪ್ರಕಾಶ್ ನಗರ್ಲೆ, ಮಹೇಶ್ ಕಲ್ಕುಂದ, ಅಕ್ಷಯ ಮುಳ್ಳೂರು, ಧ್ರುವಕುಮಾರ ಮುಳ್ಳೂರು, ಬಸವರಾಜು ಗೀಕಳ್ಳಿ, ಸುರೇಶ್ ಹೊಸೂರು, ಮಹೇಶ್ ಹಲ್ಲರೆ, ಶಿವರಾಜು ದೇಬೂರು, ಮಲ್ಲಿಕಾರ್ಜುನ್ ಹೊಸೂರು, ಮಹದೇವಸ್ವಾಮಿ ಉಪ್ಪನಹಳ್ಳಿ, ಶಂಕರ್ ಶ್ರೀರಾಂಪುರ, ಶಿವಮೂರ್ತಿ ಕಸುವಿನಹಳ್ಳಿ, ಬೊಕ್ಕಹಳ್ಳಿ ರವಿ, ವಸಂತ ಕುಮಾರ ಹೊಸಹಳ್ಳಿ, ಎನ್.ಡಿ.ಮಹದೇವಸ್ವಾಮಿ, ಬಸವರಾಜು ವಳಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

