ಮೈಸೂರು: ಹುಣಸೂರು ತಾಲೂಕು ಹರವೆ ಗ್ರಾಮದ ಹೆಚ್.ಸಿ.ಹರೀಶ್ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ, ಸಾಲಿಗ್ರಾಮ ಪೊಲೀಸ್ ಠಾಣಾಧಿಕಾರಿಯ ಪಕ್ಷಪಾತ ಧೋರಣೆ ಖಂಡಿಸಿ ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ, ಮೈಸೂರು ಜಿಲ್ಲಾ ಮಡಿವಾಳ ಮಾಚಿದೇವರ ಸಂಘ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಜಾಗೃತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಹುಣಸೂರು ತಾಲೂಕು ಮಡಿವಾಳ ಸಂಘದ ಉಪಾಧ್ಯಕ್ಷ ಹೆಚ್.ಸಿ.ಹರೀಶ್ ಕೊಲೆಯಾಗಿ ೮ ತಿಂಗಳು ಕಳೆದರೂ ನ್ಯಾಯ ಸಿಕ್ಕಿಲ್ಲ. ಕೊಲೆಗೆ ಕಾರಣರಾಗಿರುವ ರವಿ ಎಂಬುವವರು ದಕ್ಷಿಣಕನ್ನಡ ಜಿಲ್ಲೆಯಿಂದ ಹುಣಸೂರಿಗೆ ಸ್ಥಳಾಂತರಗೊಂಡಿದ್ದು ಸುತ್ತಮುತ್ತಲಿನ ಅಮಾಯಕ ಜನರಿಗೆ ಬಡ್ಡಿ ಸಾಲ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ.

ಬಡ ರೈತರು, ಕೃಷಿ ಕಾರ್ಮಿಕರು, ಕಾಯಕ ಸಮಾಜಗಳ ಜನರನ್ನು ಗುರಿಯಾಗಿಟ್ಟುಕೊಂಡು ಬಡ್ಡಿ ವ್ಯವಹಾರ ಮಾಡುತ್ತಿದ್ದಾರೆ. ರವಿಯಿಂದ ಸಾಲ ಪಡೆದ ಹರೀಶ್ ಕಾಲಕಾಲಕ್ಕೆ ಬಡ್ಡಿ ಸಮೇತ ಸಾಲ ಮರುಪಾವತಿ ಮಾಡುತ್ತಿದ್ದರು. ಒಂದು ತಿಂಗಳು ವಿಳಂಬವಾದ್ದರಿಂದ ಹರೀಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ಮಾಡಿದ್ದ ವೇಳೆ ಹರೀಶ್ ಸಹ ರವಿ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ಕೋಪಗೊಂಡ ಗೂಂಡಾಗಳೊಂದಿಗೆ ಸೇರಿಕೊಂಡು ಹರೀಶ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ದೂರಿದರು.

ಈ ಘಟನೆ ಯೋಜಿತ ಕೊಲೆಯೆಂದು ಊಹಿಸಬಹುದು. ಆದರೆ, ಸಾಲಿಗ್ರಾಮ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣರಾಜು ಇದೊಂದು ಆತ್ಮಹತ್ಯೆ ಎಂದು ಹೇಳಿ ಹರೀಶ್‌ನ ಪತ್ನಿ ಸುನೀತಾ ಅವರಿಂದ ಯಾವುದೋ ಪತ್ರಕ್ಕೆ ಸಹಿ ಪಡೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಹರೀಶ್ ಅವರಂತಹ ಅಮಾಯಕರ ಕೊಲೆಗಳು ಮುಚ್ಚಿಹೋಗುತ್ತಿವೆ.

ಇನ್ಸ್‌ಪೆಕ್ಟರ್ ಪಕ್ಷಪಾತ ಧೋರಣೆಯಿಂದ ನ್ಯಾಯ ಮರೀಚಿಕೆಯಾಗಿದೆ. ಹೀಗಾಗಿ ಹರೀಶ್ ಕೊಲೆ ಪ್ರಕರಣ ಯಾವುದೇ ಕಾರಣಕ್ಕೂ ಮುಚ್ಚಿಹೋಗಬಾರದು. ಮರುತನಿಖೆ ನಡೆಸಿ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿ ಹರೀಶ್‌ನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ನೀಡಿ ಹರೀಶ್ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಚಿ ದೇವರ ಸಂಘದ ರವಿಕುಮಾರ್, ರವಿನಂದನ್, ನಾಗೇಶ್, ದಲಿತ ಚಳುವಳಿ ವೇದಿಕೆಯ ಹರಿಹರ ಆನಂದಸ್ವಾಮಿ, ಬಂಗವಾದಿ ನಾರಾಯಣಪ್ಪ, ರಮೇಶ್, ಈರಯ್ಯ ಹಿಂದುಳಿದ ವರ್ಗದ ಜಾಗೃತಿ ವೇದಿಕೆ ಅಧ್ಯಕ್ಷ ಶಿವರಾಮ್, ಹರೀಶ್ ಕುಟುಂಬಸ್ಥರು ಸೇರಿದಂತೆ ಹಲವರು ಭಾಗವಹಿಸಿದ್ದರು.