ಮೈಸೂರು: ಚಾಮುಂಡಿಬೆಟ್ಟದ ಭಕ್ತಾಧಿಗಳ ಹಣ ಲೂಟಿ ಮಾಡುತ್ತಿರುವ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ ಎಂದು ಹಳೆ ಜಿಲ್ಲಾಧಿಕಾರಿ ಕಚೇರಿ ಎದುರು ಮೈಸೂರು ಕನ್ನಡ ವೇದಿಕೆ ಪದಾಧಿಕಾರಿಗಳು ಪ್ರತಿಭಟಿಸಿದರು.

ಚಾಮುಂಡಿ ಬೆಟ್ಟದಲ್ಲಿ ಭಕ್ತಾಧಿಗಳ ಸುಲಿಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇವೆಲ್ಲವನ್ನು ಕಂಡ ಧಾರ್ಮಿಕ ದತ್ತಿ ಇಲಾಖೆ ಮೌನವಾಗಿರುವುದನ್ನು ನೋಡಿದರೆ ಹಲವು ಅನುಮಾನಗಳಿಗೆ ಎಡ ಮಾಡಿಕೊಡುತ್ತದೆ. ದೇಶದಲ್ಲೇ ಎರಡನೇ ಮಹಾನಂದಿ ಎಂದು ಖ್ಯಾತವಾದ ನಂದಿ ಮೂರ್ತಿಯ ಕಡೆ ಹೋಗುವುದಕ್ಕೆ ದಾರಿ ಇನ್ನೂ ಕೂಡ ಸರಿಯಾಗಿಲ್ಲ. ಐದು ವರ್ಷಗಳಿಂದ ಈ ಕಾಮಗಾರಿ ನಡೆಯದೆ ಭೂಕುಸಿತವಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳಾಗಲಿ ಮುಜರಾಯಿ ಇಲಾಖೆಯಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ ಹೋಗುವುದಕ್ಕೆ ಚಪ್ಪಲಿ ಸ್ಟ್ಯಾಂಡ್ ನಲ್ಲೂ ಸಹ ಲಕ್ಷಾಂತರ ರೂ. ಹಗರಣ ನಡೆದಿದೆ. ಚಾಮುಂಡಿ ಬೆಟ್ಟದ ಲೆಕ್ಕಾಧಿಕಾರಿಗಳ ಲೆಕ್ಕ ರಾಮನ ಲೆಕ್ಕ ಭೀಮನ ಲೆಕ್ಕವಾಗಿದೆ. ಇತ್ತೀಚೆಗೆ ಚಾಮುಂಡಿ ಬೆಟ್ಟದ ಮೇಲೆ ದೇವಸ್ಥಾನ ಹಿಂಭಾಗ ಒಂದು ಎಕರೆ ಎಷ್ಟು ಜಾಗವನ್ನು ಭೂಮಾಫಿಯಾದವರು ಮರ ಕಡಿದು ಗೋ ಶಾಲೆ ಎಂದು ನಾಮಫಲಕ ಹಾಕಿದ್ದಾರೆ. ಆದರೆ, ಅರಣ್ಯ ಇಲಾಖೆಯವರು ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ಭೂಮಾಫೀಯ ಕೊಟ್ಟಿರುವ ಎಂಜಲು ಕಾಸಿಗೆ ಆಸೆಪಟ್ಟು ನಿದ್ರಾವಸ್ಥೆಯಲ್ಲಿದ್ದಾರೆ.

ಒಂದು ಕಡೆ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಕಾಮಗಾರಿಗಳತ್ತ ಗಮನ ಕೊಡದೆ ಬೆಟ್ಟದಲ್ಲಿ ಹುಂಡಿಯಲ್ಲಿ ಎಷ್ಟು ಹಣ ಬರುತ್ತದೆ ಅದನ್ನು ನಮಗೆ ನೀಡಿ ಎಂದು ಅಧಿಕಾರಿಗಳಗೂ ತಾಕೀತು ಮಾಡಿದ್ದಾರೆ. ಇದರಿಂದ ಉಂಡವನೇ ಜಾಣ ಎಂದು ಅಧಿಕಾರಿಗಳ ಲೂಟಿ ಹೆಚ್ಚಾಗಿದೆ ಎಂದು ಆರೋಪಿಸಿದರು.

ದೇವಸ್ಥಾನಕ್ಕೆ ಬರುವ ಭಕ್ತರ ದೇವಸ್ಥಾನಕ್ಕೆ ಕಾವಲು ಕಾಯುವ ಸೆಕ್ಯೂರಿಟಿ ಗಾರ್ಡುಗಳು ದಿನಕ್ಕೆ ಸಾವಿರಾರು ರೂ. ಮಾಡುತ್ತಿದ್ದಾರೆ. ಅವರನ್ನು ವಿಚಾರಿಸಿದರೆ ಎಲ್ಲರಿಗೂ ನಾವು ಹಣ ಎಲ್ಲಿ ಕೊಡಬೇಕು. ಇಲ್ಲವಾದರೆ ನಮ್ಮನ್ನು ಬೇರೆ ಕಡೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಕೂಲಂಕುಶವಾಗಿ ಹೇಳುತ್ತಾರೆ.

ಪ್ರತಿನಿತ್ಯ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು ತಮ್ಮ ಕಷ್ಟಗಳನ್ನು ತಾಯಿ ಚಾಮುಂಡೇಶ್ವರಿ ತೀರಿಸಲಿ ಎಂಬ ಹರಿಕೆಯೊಂದಿಗೆ ಭಕ್ತಿ ಭಾವದಿಂದ ಹಲವಾರು ಪದಾರ್ಥಗಳನ್ನು ಕಾಣಿಕೆಯಾಗಿ ನೀಡುತ್ತಾ ಬಂದಿದ್ದು ಇದು ಸಂಪ್ರದಾಯವಾಗಿದೆ. ವಿಪರ್ಯಾಸವೆಂದರೆ ಭಕ್ತರು ನೀಡುವ ಕಾಣಿಕೆಯನ್ನು ದೇವಸ್ಥಾನದ ಸಿಬ್ಬಂದಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ದುರ್ದೈವದ ಸಂಗತಿ ಎಂದು ಅವರು ದೂರಿದರು.

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಮಹದೇವಸ್ವಾಮಿ, ಗುರುಬಸಪ್ಪ, ಪ್ಯಾಲೇಸ್ ಬಾಬು, ಮನೋಹರ್, ಅರವಿಂದ್, ಹರೀಶ್, ಸಿದ್ದಪ್ಪ, ಗೋವಿಂದರಾಜು, ಸ್ವಾಮಿ, ಮದನ್, ಸುನಿಲ್, ಶಿವಣ್ಣ ನಾಯಕ, ಶಿವು, ಮಾಲಿನಿ, ಪುಷ್ಪಲತಾ, ಮಾದಪ್ಪ, ಸ್ವಾಮಿಗೌಡ, ಚಿನ್ನಪ್ಪ ಮೊದಲಾದವವರು ಪಾಲ್ಗೊಂಡಿದ್ದರು.