ಮೈಸೂರು: ಪತ್ನಿಯ ಕೊಲೆ ಮಾಡದಿದ್ದರೂ ನಿರಪರಾಧಿಗೆ ಶಿಕ್ಷೆ ಕೊಡಿಸಿದ್ದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್, ತನಿಖಾಧಿಕಾರಿ, ಕುಶಾಲನಗರ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ ಐಆರ್ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿ ಭ್ರಷ್ಟಾಚಾರ ನಿರ್ಮೂಲನ ಸಮಿತಿ ವತಿಯಿಂದ ಎಸ್‌ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಭ್ರಷ್ಟಾಚಾರ, ಅಕ್ರಮಗಳಲ್ಲಿ ಭಾಗಿಯಾದ ಪೊಲೀಸರು ಆದಿವಾಸಿ ಜನಾಂಗದ ಸುರೇಶ್ ಎಂಬುವವನನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇನ್ಸ್‌ಪೆಕ್ಟರ್ ಬಿ.ಜಿ.ಪ್ರಕಾಶ್, ಎಎಸ್‌ ಐ ಸೋಮಶೇಖರ್, ಸಿಬ್ಬಂದಿಗಳಾದ ಜಿತೇಂದ್ರಕುಮಾರ, ಎಂ.ಪ್ರಕಾಶ್, ಮುಖೇಶ್‌ ಕುಮಾರ್ ಸುರೇಶನಿಗೆ ಸಂಬಂಧವಿಲ್ಲದ ಸುಳ್ಳು ಕೊಲೆ ಪ್ರಕರಣದಲ್ಲಿ ಸಿಲುಕಿಸಿ, ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಸಿ ೨ ವರ್ಷ ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ. ತಮ್ಮ ಸ್ವಾರ್ಥ ಸಾಧನೆ, ಭ್ರಷ್ಟಾಚಾರದ ಕಾರಣಕ್ಕೆ ನಿರಪರಾಧಿಗೆ ಶಿಕ್ಷೆ ಕೊಡಿಸಿರುವ ಪೊಲೀಸರು ನ್ಯಾಯಾಂಗ ವ್ಯವಸ್ಥೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಸರ್ಕಲ್ ಇನ್ಸ್‌ ಪೆಕ್ಟರ್ ಬಿ.ಜಿ.ಪ್ರಕಾಶ್ ಕರ್ತವ್ಯನಿಷ್ಠೆ ಕುರಿತು ತನಿಖೆ ನಡೆಸಬೇಕು. ಬೆಟ್ಟದಪುರ ವ್ಯಾಪ್ತಿಯಲ್ಲಿ ಪತ್ತೆಯಾದ ಅಸ್ಥಿ ಪಂಜರ ಯಾರದೆಂದು ಪತ್ತೆ ಹೆಚ್ಚಬೇಕು. ವಿಚಾರಣಾ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಹೇಳಿ ವಂಚಿಸಿರುವ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುರೇಶ್ ಎಂಬಾತ ತನ್ನ ಹೆಂಡತಿಯನ್ನು ಕೊಲೆ ಮಾಡಿಲ್ಲದಿದ್ದರೂ ೨ ವರ್ಷ ಶಿಕ್ಷೆ ಅನುಭವಿಸುವಂತೆ ಮಾಡಿದ ತನಿಖಾಧಿಕಾರಿಗಳನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗಡಿ, ಯತಿರಾಜ್, ಮೋಹನ್‌ಕುಮಾರ್, ನಂದ ಕಿಶೋರ್, ವಿಜಯ್, ರವಿಕಾಂತ್‌ರಾವ್, ಅನಂತು, ರಂಗನಾಥ್ ಬಂಗಾರಪ್ಪ, ಚಿದಾನಂದ, ಮೈಸೂರು ಬಸವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.