ನಂಜನಗೂಡು: ನಂಜನಗೂಡು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರೊ.ಎಂ.ಡಿ ನಂಜುಂಡಸ್ವಾಮಿ ಸಮುದಾಯ ಭವನವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸಿದರು.
2023-24ನೇ ಸಾಲಿನ ನಬಾರ್ಡ್ ಆರ್.ಐ.ಡಿ.ಎಫ್ -29 ರ ಯೋಜನೆಯಡಿ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ನಂಜನಗೂಡು ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮುಚ್ಚಿದ ಹರಾಜುಕಟ್ಟೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ, ಜಾನುವಾರುಗಳ ಉಪ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಮುಚ್ಚಿದ ಹರಾಜು ಕಟ್ಟೆ ನಿರ್ಮಾಣ, 2.5 ಕೋಟಿ ರೂ. ವೆಚ್ಚದಲ್ಲಿ ಪ್ರೊ. ಎಂ ಡಿ ನಂಜುಂಡಸ್ವಾಮಿ ಸಮುದಾಯ ಭವನ ನಿರ್ಮಿಸಲಾಗಿದೆ.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಪ್ರೊಫೆಸರ್ ನಂಜುಂಡಸ್ವಾಮಿ ರವರ ಹೆಸರಿನಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ರೈತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ನಂಜುಂಡಸ್ವಾಮಿ ರವರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಪ್ರತಿಯೊಬ್ಬರೂ ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.
ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ನಂಜುಂಡಸ್ವಾಮಿ ಸಮುದಾಯ ಭವನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗದ ರೈತರ ಜಮೀನುಗಳಿಗೆ ತೆರಳಲು ರಸ್ತೆ ಇಲ್ಲ ಇದನ್ನು ನಿರ್ಮಾಣ ಮಾಡಿಕೊಡಿ ಎಂದು ಸಚಿವರಾದ ಪ್ರಿಯಾಂಕ ಖರ್ಗೆ ರವರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಈಗಾಗಲೇ ರೈತಪಥ ಎಂಬ ಯೋಜನೆಯೊಂದಿಗೆ ಜಮೀನುಗಳಿಗೆ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ವಿದ್ಯಾಸಾಗರ್, ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಾದಪ್ಪ, ಮುದ್ದು ಮಾದ ಶೆಟ್ಟಿ, ಮಾಜಿ ಉಪಾಧ್ಯಕ್ಷ ಸಿಆರ್ ಮಹದೇವ್, ಕೆಂಡಗಣ್ಣ ಸ್ವಾಮಿ, ನಗರಸಭಾ ಸದಸ್ಯರಾದ ರವಿ, ಬಸವರಾಜು, ಎಪಿಎಂಸಿ ಕಾರ್ಯದರ್ಶಿ ಬಿ ಮಹೇಶ್ ಸೇರಿದಂತೆ ರೈತರು ಹಾಜರಿದ್ದರು.

