ನಂಜನಗೂಡು: ಮಾನವೀಯ ಸಂಬಂಧ ಗಟ್ಟಿಗೊಳಿಸುವ ಜಾನಪದ ಕಲೆಗೆ ತನ್ನದೇ ಇತಿಹಾಸವಿದ್ದು, ಅದನ್ನು ಉಳಿಸಿ ಬೆಳೆಸುವುದು ಮುಖ್ಯವಾಗಬೇಕು ಎಂದು ನಾದಗಂಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕಳಲೆ ದೇವಣ್ಣ ಹೇಳಿದರು.

ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ಶ್ರೀ ಬೆಟ್ಟದ ಚಿಕ್ಕಮ್ಮ ದೇವಿಯ ಆರಾಧನಾ ಮಹೋತ್ಸವದ ಅಂಗವಾಗಿ ನಾದಗಂಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಜಾನಪದ, ಭಕ್ತಿ ಗೀತೆ, ರಂಗ ಗೀತೆಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಜಾನಪದ ಕಲೆಗಳಲ್ಲಿ ಉಳಿಸಿ ಬೆಳೆಸುವ ಅನಿವಾರ್ಯತೆಯಿದೆ. ಜಾನಪದ ಕಲೆಗಳು ಹಳ್ಳಿಯಲ್ಲಿ ಜೀವಂತವಾಗಿವೆ. ಹಳ್ಳಿಗಳಲ್ಲಿ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದರಿಂದ ಇತ್ತೀಚೆಗಿನ ದಿನಗಳಲ್ಲಿ ಜಾನಪದ ಕಲೆಗಳು ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾನಪದ ಅಂದರೆ ವ್ಯಕ್ತಿತ್ವ. ಆದ್ದರಿಂದ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ ಕುರಿತು ಅವರ ಜೀವನ ಚರಿತ್ರೆ, ಕಥೆಯ ಜಾನಪದವು ಮೈಸೂರು ಮತ್ತು ಚಾಮರಾಜನಗರ ಭಾಗದ ಪ್ರತಿ ಮನೆಯವರಿಗೂ ಗೊತ್ತು. ಇಂತಹ ಪವಾಡ ಪುರುಷರ ಜಾನಪದವನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಾದಗಂಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ದೇವಣ್ಣ, ಮಹದೇವ ನಾಯಕ, ಕೀಬೋರ್ಡ್ ರೇಚಣ್ಣ, ಮಾದೇಗೌಡ, ಮಹದೇವ, ಮಹೇಶ್, ಕೀಬೋರ್ಡ್ ಕೀರ್ತಿ ಕುಮಾರ, ತಬಲ ಋಷಿ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.